ಬೆಂಗಳೂರು: ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇಪದೇ ಕಾಯಿಸಿ ಆಹಾರ ತಯಾರಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಉಂಟಾಗುವ ಗಂಭೀರ ದುಷ್ಪರಿಣಾಮಗಳಿಗೆ ಶಾಶ್ವತ ಕಡಿವಾಣ ಹಾಕಲು ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯಾದ್ಯಂತ ವಿನೂತನ ‘ಟ್ರೇಸಬಿಲಿಟಿ ಆ್ಯಪ್’ ಜಾರಿಗೆ ತರಲು ನಿರ್ಧರಿಸಿದೆ. ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಹೊಸ ವ್ಯವಸ್ಥೆಯಡಿ ಹೋಟೆಲ್, ರೆಸ್ಟೋರೆಂಟ್ ಹಾಗೂ ಬೇಕರಿ ಸೇರಿದಂತೆ ಎಲ್ಲಾ ಆಹಾರ ಉದ್ದಿಮೆದಾರರು ಬಳಸಿದ ಅಡುಗೆ ಎಣ್ಣೆಯನ್ನು ಕಡ್ಡಾಯವಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮಾನ್ಯತೆ ಪಡೆದ ‘ರುಕೋ’ ಏಜೆನ್ಸಿಗಳ ಮೂಲಕವೇ ವಿಲೇವಾರಿ ಮಾಡಬೇಕಾಗುತ್ತದೆ. ಎಣ್ಣೆಯ ಸಂಗ್ರಹ, ಸಾಗಣೆ ಹಾಗೂ ವಿಲೇವಾರಿಯ ಪ್ರತಿ ಹಂತವೂ ಈ ಆ್ಯಪ್ ಮೂಲಕ ಪಾರದರ್ಶಕವಾಗಿ ದಾಖಲಾಗಲಿದ್ದು, ಬಳಸಿದ ಎಣ್ಣೆ ಯಾವುದೇ ಕಾರಣಕ್ಕೂ ಮತ್ತೆ ಅಡುಗೆಮನೆ ಸೇರದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
“ಉದಾಹರಣೆಗೆ, ಒಂದು ಹೋಟೆಲ್ನಲ್ಲಿ 300ರಿಂದ 400 ಲೀಟರ್ ಎಣ್ಣೆ ಖರೀದಿಸಿದರೆ, ಅದರಲ್ಲಿ ಕನಿಷ್ಠ 75ರಿಂದ 100 ಲೀಟರ್ ಬಳಸಿದ ಎಣ್ಣೆ ವಾಪಸ್ ಸಂಗ್ರಹವಾಗಲೇಬೇಕು. ಅಂದರೆ ಪ್ರತಿ 100 ಲೀಟರ್ಗೆ ಕನಿಷ್ಠ 15 ಲೀಟರ್ ಬಳಸಿದ ಎಣ್ಣೆಯ ಲೆಕ್ಕ ಸಿಗಬೇಕು. ಹೀಗೆ ಸಂಗ್ರಹವಾದ ಎಣ್ಣೆಯನ್ನು ಸಣ್ಣ ಹೋಟೆಲ್ಗಳಿಗೆ ಮರು ಮಾರಾಟ ಮಾಡುವುದನ್ನು ತಡೆಯುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ” ಎಂದು ಅವರು ವಿವರಿಸಿದರು.
ಪ್ರಾಥಮಿಕ ಹಂತದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿಯಲ್ಲಿ ಸಂಗ್ರಹಣಾ ಕೇಂದ್ರಗಳನ್ನು ತೆರೆಯಲಾಗುವುದು. ಇಲ್ಲಿ ಸಂಗ್ರಹವಾದ ಎಣ್ಣೆಯನ್ನು ಬಯೋ-ಡೀಸೆಲ್ ಅಥವಾ ಸೋಪ್ ತಯಾರಿಕೆಯಂತಹ ಜೈವಿಕ ಯೋಜನೆಗಳಿಗೆ ಬಳಸಲಾಗುವುದು. ಯಾವುದೇ ಕಾರಣಕ್ಕೂ ಈ ತ್ಯಾಜ್ಯ ಎಣ್ಣೆ ಚರಂಡಿ, ಹಳ್ಳಗಳಿಗೆ ಅಥವಾ ಬೇರೆ ಹೋಟೆಲ್ಗಳಿಗೆ ಸೇರದಂತೆ ಎಚ್ಚರ ವಹಿಸಲಾಗುವುದು ಎಂದರು.
ಗುಣಮಟ್ಟ ಪರೀಕ್ಷೆ: ಕರಿದ ಎಣ್ಣೆಯ ಗುಣಮಟ್ಟವನ್ನು ಸ್ಥಳದಲ್ಲೇ ಪರೀಕ್ಷಿಸಲು ಅಧಿಕಾರಿಗಳಿಗೆ ಈಗಾಗಲೇ ‘ಟಿಪಿಸಿ’ ಮೀಟರ್ಗಳನ್ನು ನೀಡಲಾಗಿದೆ. TPC ಪ್ರಮಾಣ 25 ಮೀರಿದರೆ ಅಂತಹ ಎಣ್ಣೆಯನ್ನು ಅಡುಗೆಗೆ ಬಳಸುವಂತಿಲ್ಲ
91 ಲಕ್ಷ ಲೀಟರ್ ಸಂಗ್ರಹ: 2022ರಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 91 ಲಕ್ಷಕ್ಕೂ ಹೆಚ್ಚು ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಲಾಗಿದೆ. ಹೊಸ ಆ್ಯಪ್ನಿಂದ ಈ ವ್ಯವಸ್ಥೆ ಇನ್ನಷ್ಟು ಬಿಗಿಯಾಗಲಿದೆ.
ಮನೆಮನೆಗೆ ವಿಸ್ತರಣೆ: ಮುಂದಿನ ಹಂತದಲ್ಲಿ ಹಸಿ ಕಸ ಮತ್ತು ಒಣ ಕಸ ಸಂಗ್ರಹಿಸುವ ಮಾದರಿಯಲ್ಲೇ, ಮನೆಮನೆಗಳಲ್ಲಿ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು.
ಈ ಕುರಿತು ವಿಸ್ತೃತವಾಗಿ ಚರ್ಚಿಸಲು ನವೆಂಬರ್ 25ರಂದು ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ಸಭೆ ಹಾಗೂ ನವೆಂಬರ್ 26ರಂದು ರಾಷ್ಟ್ರಮಟ್ಟದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳ ಸಮ್ಮೇಳನ (ಕಾನ್ಫರೆನ್ಸ್) ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. “ಶುದ್ಧ ಮತ್ತು ಸುರಕ್ಷಿತ ಆಹಾರ ಪ್ರತಿಯೊಬ್ಬ ನಾಗರಿಕನ ಹಕ್ಕು. ಬಳಸಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದರೆ, ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಯ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ದೂರು ನೀಡುವ ಮೂಲಕ ಕೈಜೋಡಿಸಬೇಕು” ಎಂದು ಅವರು ಮನವಿ ಮಾಡಿದರು.








