ಉಪ್ಪಿನಂಗಡಿ : ರಾಷ್ಟ್ರೀಯ ಹೆದ್ದಾರಿ 75ರ ಬಿಳಿಯೂರು ಗ್ರಾಮದ ಮೈರಕಟ್ಟೆ ಎಂಬಲ್ಲಿ ಶುಕ್ರವಾರ ಆಟೊ ರಿಕ್ಷಾಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸರಳೀಕಟ್ಟೆ ನೈತಡ್ಕ ನಿವಾಸಿ ಸದಾಶಿವ (55) ಮೃತ ದುರ್ದೈವಿ.
ಸದಾಶಿವ ಅವರು ಶುಕ್ರವಾರ (ನ.13) ತಮ್ಮ ಆಟೊ ರಿಕ್ಷಾದಲ್ಲಿ ಉಪ್ಪಿನಂಗಡಿಯಿಂದ ಬಿಳಿಯೂರು ಕಡೆಗೆ ತೆರಳುತ್ತಿದ್ದರು. ಮೈರಕಟ್ಟೆ ಸಮೀಪಿಸುತ್ತಿದ್ದಂತೆ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಆಟೊ ರಿಕ್ಷಾಗೆ ರಭಸವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಆಟೊ ರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿದ್ದು, ಚಾಲಕ ಸದಾಶಿವ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ತಕ್ಷಣವೇ ಸ್ಥಳೀಯರು ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ತೀವ್ರ ರಕ್ತಸ್ರಾವ ಹಾಗೂ ಗಾಯಗಳಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.









