ಬೆಳ್ತಂಗಡಿ : ಚಿನ್ನದ ಉಂಗುರ ಖರೀದಿಸುವ ಸೋಗಿನಲ್ಲಿ ಜ್ಯುವೆಲ್ಲರಿ ಮಳಿಗೆಗೆ ಬಂದ ಇಬ್ಬರು ಅಪರಿಚಿತ ಕಳ್ಳರು, ಮಾಲೀಕರ ಗಮನ ಬೇರೆಡೆ ಸೆಳೆದು ₹4.40 ಲಕ್ಷ ಮೌಲ್ಯದ ಚಿನ್ನದ ಬ್ರೇಸ್‌ಲೆಟ್‌ಗಳನ್ನು ಎಗರಿಸಿ ಪರಾರಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನಲ್ಲಿ ನಡೆದಿದೆ.
ಈ ಕುರಿತು ಮಡಂತ್ಯಾರು ಕಾನ್ವೆಂಟ್ ರೋಡ್ ನಿವಾಸಿ, ‘ಸಾನಿಧ್ಯ ಜ್ಯುವೆಲ್ಲರೀಸ್’ ಮಾಲೀಕ ರಾಜೇಶ್ (43) ನೀಡಿದ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ನವೆಂಬರ್ 16ರಂದು ಸಂಜೆ ರಾಜೇಶ್ ಅವರು ಮಡಂತ್ಯಾರಿನ ಆರ್.ಕೆ. ಕಾಂಪ್ಲೆಕ್ಸ್‌ನಲ್ಲಿರುವ ತಮ್ಮ ‘ಸಾನಿಧ್ಯ ಜ್ಯುವೆಲ್ಲರಿ’ ಶಾಪ್‌ನಲ್ಲಿದ್ದರು. ಸಂಜೆ ಸುಮಾರು 6.25ರಿಂದ 6.35ರ ಮಧ್ಯಾವಧಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಚಿನ್ನದ ಉಂಗುರ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದಾರೆ.
ಉಂಗುರಗಳನ್ನು ವೀಕ್ಷಿಸುವ ನಾಟಕವಾಡಿದ ಕಳ್ಳರು, ಅಂಗಡಿಯಲ್ಲಿದ್ದ ಸುಮಾರು ₹4,40,000 ಮೌಲ್ಯದ, ಅಂದಾಜು 35 ಗ್ರಾಂ ತೂಕದ 5 ರಿಂದ 6 ಚಿನ್ನದ ಬ್ರೇಸ್‌ಲೆಟ್‌ಗಳಿದ್ದ ಪ್ಲಾಸ್ಟಿಕ್ ಪ್ಯಾಕೆಟ್ ಅನ್ನು ಕ್ಷಣಾರ್ಧದಲ್ಲಿ ಲಪಟಾಯಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಅಂಗಡಿಯಲ್ಲಿ ಚಿನ್ನಾಭರಣಗಳನ್ನು ಜೋಡಿಸಿ ಇಡುವ ಸಂದರ್ಭದಲ್ಲಿ ಬ್ರೇಸ್‌ಲೆಟ್‌ಗಳಿದ್ದ ಪ್ಯಾಕೆಟ್ ನಾಪತ್ತೆಯಾಗಿರುವುದು ರಾಜೇಶ್ ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅಂಗಡಿಯ ಒಳಭಾಗದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಉಂಗುರ ಖರೀದಿಸಲು ಬಂದಿದ್ದ ಇಬ್ಬರು ಅಪರಿಚಿತರೇ ಚಿನ್ನದ ಬ್ರೇಸ್‌ಲೆಟ್‌ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಕಲಂ 303(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.








