ಮಂಗಳೂರು: ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಲಾಗಿದೆ ಎಂಬ ಸುದ್ದಿ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕಣಚೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ‘‘ಇದು ಅಪಹರಣವಲ್ಲ, ವಿದ್ಯಾರ್ಥಿನಿಯ ಪೋಷಕರೇ ಬಂದು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಹನವಾಝ್ ಮಾಣಿಪ್ಪಾಡಿ, ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ವಿವರಿಸಿದರು.
‘ನಮ್ಮ ಕಾಲೇಜಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಅಪಹರಣವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ, ಸದರಿ ವಿದ್ಯಾರ್ಥಿನಿ ಕಳೆದ ಕೆಲವು ದಿನಗಳಿಂದ ತರಗತಿಗೆ ಸರಿಯಾಗಿ ಹಾಜರಾಗುತ್ತಿರಲಿಲ್ಲ. ಈ ಕುರಿತು ಆಕೆಯ ಪೋಷಕರು ಕಾಲೇಜಿಗೆ ಬಂದು ವಿಚಾರಣೆ ನಡೆಸಿದ್ದರು. ಅದೇ ದಿನ ಆಕೆ ಪಾಂಡೇಶ್ವರ ಪೊಲೀಸ್ ಠಾಣೆಗೆ ತೆರಳಿ, ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಪಾಲಕರ ವಿರುದ್ಧವೇ ದೂರು ನೀಡಿದ್ದಳು. ಇತ್ತ ಆಕೆ ಕಾಲೇಜು ಹಾಸ್ಟೆಲ್ ಪರಿಸರದಲ್ಲಿ ಇಲ್ಲದ ಕಾರಣ ನವೆಂಬರ್ 18ರಂದು ಕಾಲೇಜು ಆಡಳಿತ ಮಂಡಳಿ ವತಿಯಿಂದಲೂ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು’’ ಎಂದು ಡೀನ್ ಮಾಹಿತಿ ನೀಡಿದರು.
‘ಪಾಂಡೇಶ್ವರ ಪೊಲೀಸರು ವಿದ್ಯಾರ್ಥಿನಿಯನ್ನು ಎಸ್ಕಾರ್ಟ್ ಮೂಲಕ ಉಳ್ಳಾಲ ಠಾಣೆಗೆ ಕರೆತಂದು ಪೋಷಕರೊಂದಿಗೆ ಮಾತುಕತೆ ನಡೆಸಿದ್ದರು. ಮರುದಿನ ಪೋಷಕರು ಮತ್ತು ಸಂಬಂಧಿಕರು ಆಕೆಯನ್ನು ಮನೆಗೆ ಕರೆದೊಯ್ಯಲು ಕಾಲೇಜಿಗೆ ಬಂದಿದ್ದರು. ಆದರೆ, ಆಕೆ ಮನೆಯವರ ಜೊತೆ ತೆರಳಲು ನಿರಾಕರಿಸಿದ್ದಾಳೆ. ಇದರಿಂದ ಇರಿಸುಮುರಿಸುಗೊಂಡ ಕುಟುಂಬಸ್ಥರು ಆಕೆಯ ವಿರೋಧದ ನಡುವೆಯೂ ಬಲವಂತವಾಗಿ ವಾಹನದಲ್ಲಿ ಕರೆದೊಯ್ದಿದ್ದಾರೆ. ಆಕೆಯನ್ನು ಪೋಷಕರೇ ಕರೆದೊಯ್ಯುತ್ತಿದ್ದಾರೆ ಎಂಬುದು ತಿಳಿದಿದ್ದರಿಂದ ಅಲ್ಲಿದ್ದವರು ಯಾರೂ ತಡೆಯಲು ಹೋಗಲಿಲ್ಲ’’ ಎಂದು ಡಾ. ಶಹನವಾಝ್ ಸ್ಪಷ್ಟಪಡಿಸಿದರು.
ಈ ದೃಶ್ಯವನ್ನು ಯಾರೋ ವಿಡಿಯೋ ಮಾಡಿ, ಅಪಹರಣವಾಗಿದೆ ಎಂಬ ರೀತಿಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ಕಾಲೇಜಿನ ಘನತೆಗೆ ಧಕ್ಕೆ ಉಂಟಾಗುವಂತೆ ಮಾಡಿದ್ದಾರೆ. ಸತ್ಯಾಸತ್ಯತೆಯನ್ನು ಅರಿತು ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು’’ ಎಂದು ಅವರು ವಿನಂತಿಸಿದರು.
ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಪೋಷಕರೊಂದಿಗೆ ಮಾತ್ರ ಕಳುಹಿಸಲಾಗುತ್ತದೆ; ಅಣ್ಣ ಅಥವಾ ಇತರ ಸಂಬಂಧಿಕರು ಬಂದರೂ ಕಳುಹಿಸುವುದಿಲ್ಲ. ಈ ಘಟನೆಯಲ್ಲೂ ವಾಹನದಲ್ಲಿ ಪೋಷಕರೇ ಇದ್ದರು. ವಿಷಯ ತಿಳಿದ ತಕ್ಷಣ ಭದ್ರತಾ ಸಿಬ್ಬಂದಿ ನನಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿಯ ಅಕ್ಕನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಕರೆ ಸ್ವೀಕರಿಸಿರಲಿಲ್ಲ. ಪೋಷಕರೇ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಇದ್ದರೂ, ಯಾವುದೇ ಭದ್ರತಾ ಲೋಪವಾಗದಂತೆ ತಕ್ಷಣವೇ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಕಾಲೇಜಿನಲ್ಲಿ ಸುಮಾರು ಒಂದು ಸಾವಿರ ವಿದ್ಯಾರ್ಥಿಗಳ ಜವಾಬ್ದಾರಿ ನಮ್ಮ ಮೇಲಿದ್ದು, ಸುರಕ್ಷತೆಯ ವಿಚಾರದಲ್ಲಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ’’ ಎಂದು ಡೀನ್ ಸ್ಪಷ್ಟಪಡಿಸಿದರು.








