ಕಾಸರಗೋಡು: ಅಂತರ್ರಾಜ್ಯ ಕುಖ್ಯಾತ ರೈಲು ಕಳ್ಳರ ತಂಡದ ನಾಯಕನನ್ನು ಕಾಸರಗೋಡು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಆತನ ಬಳಿಯಿಂದ ಸುಮಾರು 13.74 ಲಕ್ಷ ರೂ. ಮೌಲ್ಯದ 119.86 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಹರಿಯಾಣದ ಹಿಸಾರ್ ಜಿಲ್ಲೆಯ ಭಟ್ಟೋಲ್ ರಂಗ್ರಾನ್ ನಿವಾಸಿ ದಿಲ್ಬಾಗ್ (63) ಬಂಧಿತ ಆರೋಪಿ.
ನ.21ರಂದು ಮಧ್ಯಾಹ್ನ ಕಾಸರಗೋಡು ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾಮ್ನಿಂದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಸಂಶಯಾಸ್ಪದ ವಾಗಿ ಕಂಡುಬಂದ ಈತನನ್ನು ಗಮನಿಸಿ ವಿಚಾರಿಸಿದಾಗ ತದ್ವಿರುದ್ಧ ಹೇಳಿಕೆ ನೀಡಿದ್ದು, ಈತನ ಬಳಿ ಇದ್ದ ಚೀಲವನ್ನು ತಪಾಸಣೆ ನಡೆಸಿದಾಗ ಬಟ್ಟೆಗಳ ನಡುವೆ ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟು ಅಡಗಿಸಿಟ್ಟಿದ್ದ ಮೂರು ಚಿನ್ನದ ಬಳೆಗಳು, ಎರಡು ಸರಗಳು, ಕಿವಿಯೋಲೆಗಳು, ಉಂಗುರ ಮತ್ತು ಮಂಗಳಸೂತ್ರ ಪತ್ತೆಯಾಗಿವೆ. ಚಿನ್ನಾಭರಣಗಳ ಮೂಲದ ಬಗ್ಗೆ ಸೂಕ್ತ ದಾಖಲೆಗಳನ್ನು ನೀಡಲು ವಿಫಲನಾದ ಈತನ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸಿದಾಗ ಈತ ಇನ್ನಿತರ ಪ್ರಕರಣಗಳು ಈತನೇ ಮೇಲೆ ಇರುವುದು ಗಮನಕ್ಕೆ ಬಂದಿದೆ.








