ಕುಂದಾಪುರ : ಕೋಟೇಶ್ವರದ ಪ್ರಸಿದ್ಧ ಕೊಡಿ ಹಬ್ಬದ ಜನಜಂಗುಳಿಯ ನಡುವೆ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ₹6 ಲಕ್ಷ ಮೌಲ್ಯದ 7 ಪವನ್ ಚಿನ್ನದ ಕರಿಮಣಿ ಸರವನ್ನು ಎಗರಿಸಿದ್ದ ತಮಿಳುನಾಡು ಹಾಗೂ ಕೊಡಗು ಮೂಲದ ಐವರು ಆರೋಪಿಗಳ ತಂಡವನ್ನು ಕುಂದಾಪುರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ಶೈಲಜಾ ಬಡಾವಣೆ ನಿವಾಸಿಗಳಾದ ಭಾಗ್ಯ (39), ಎಸ್. ನಾಗರಾಜ (48) ಹಾಗೂ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆ ಚೆನ್ನಾಗಂ ತಾಲೂಕಿನ ಕಟ್ಟುಮಡಗು ನಿವಾಸಿಗಳಾದ ಅಶ್ವಿನಿ ಎಲ್. ಯಾನೆ ಗಾಯತ್ರಿ (25), ಕಾಮಾಚಿ (50) ಮತ್ತು ಕೃಷ್ಣಗಿರಿ ಜಿಲ್ಲೆಯ ಬಾಲನಪಲ್ಲಿ ನಿವಾಸಿ ಆದಮ್ಮಾಳ್ ಯಾನೆ ಆದ್ಯಾಮ್ಮ (49) ಬಂಧಿತ ಆರೋಪಿಗಳು.
ನವೆಂಬರ್ 24ರಂದು ಬೆಳಿಗ್ಗೆ 10.30ರ ಸುಮಾರಿಗೆ ಗೀತಾ ಎಂಬುವವರು ತಮ್ಮ ಪತಿಯೊಂದಿಗೆ ಔಷಧ ತರಲು ಕುಂದಾಪುರಕ್ಕೆ ಹೊರಟಿದ್ದರು. ಕೋಟೇಶ್ವರದಲ್ಲಿ ಕೊಡಿ ಹಬ್ಬವಿದ್ದ ಕಾರಣ, ಕೋಟೇಶ್ವರ ಬೈಪಾಸ್ನಲ್ಲಿ ಬಸ್ ಇಳಿದ ದಂಪತಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಬೆಳಿಗ್ಗೆ 11.30ಕ್ಕೆ ದೇವರ ದರ್ಶನ ಪಡೆದ ದಂಪತಿ, ಮಧ್ಯಾಹ್ನ 12.30ರ ಸುಮಾರಿಗೆ ದೇವಸ್ಥಾನದ ಪೌಳಿಯ ಹೊರಭಾಗದ ಊಟದ ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ಜನಜಂಗುಳಿಯ ಲಾಭ ಪಡೆದ ಆರೋಪಿಗಳ ತಂಡ, ಗೀತಾ ಅವರ ಕುತ್ತಿಗೆಯಲ್ಲಿದ್ದ ₹6 ಲಕ್ಷ ಮೌಲ್ಯದ 7 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿ ಪರಾರಿಯಾಗಿತ್ತು.
ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 305ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ತನಿಖೆ ಚುರುಕುಗೊಳಿಸಿದ ಪೊಲೀಸರು ಅಂತರರಾಜ್ಯ ಕಳ್ಳರ ಜಾಲವನ್ನು ಭೇದಿಸಿ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಕಳವು ಮಾಡಲಾಗಿದ್ದ ₹6 ಲಕ್ಷ ಮೌಲ್ಯದ 7 ಪವನ್ ಚಿನ್ನದ ಕರಿಮಣಿ ಸರ, ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ 7 ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.








