ಶಿವಮೊಗ್ಗ : ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದ ನಾಲ್ವರು ಯುವಕರು ತುಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಮೂಲದ ಕತ್ರಿಗುಪ್ಪೆಯ ಕಾರ್ತಿಕ್ (31), ಇಟ್ಟಮಡುವಿನ ಪವನ್ (30), ತಲಘಟ್ಟಪುರದ ನಕುಲ್ (19) ಹಾಗೂ ಚೇತನ್ (19) ಮೃತಪಟ್ಟ ದುರ್ದೈವಿಗಳು. ಇವರಲ್ಲಿ ಕಾರ್ತಿಕ್, ಪವನ್ ಮತ್ತು ನಕುಲ್ ಕಾನೂನು ವ್ಯಾಸಂಗ ಮಾಡುತ್ತಿದ್ದು, ಚೇತನ್ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು.
ಮದುವೆ ಸಮಾರಂಭಕ್ಕೆಂದು ಬಂದಿದ್ದ ಯುವಕರ ತಂಡವು ಈಜಾಡಲು ಸಮೀಪದಲ್ಲಿ ಯಾವುದಾದರೂ ನದಿ ಇದೆಯೇ ಎಂದು ಗೂಗಲ್‌ನಲ್ಲಿ ಹುಡುಕಾಟ ನಡೆಸಿತ್ತು. ಮಹಿಷಿ ಗ್ರಾಮದ ಬಳಿ ತುಂಗಾ ನದಿ ಹರಿಯುವ ಮಾಹಿತಿ ಪಡೆದ ಯುವಕರು ಅಲ್ಲಿಗೆ ತೆರಳಿ ನೀರಿಗಿಳಿದಿದ್ದಾರೆ. ಈಜಾಡುವ ವೇಳೆ ಓರ್ವ ಯುವಕ ನೀರಿನಲ್ಲಿ ಮುಳುಗಲಾರಂಭಿಸಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಉಳಿದ ಮೂವರು ಸ್ನೇಹಿತರು ಸಹ ನೀರಿನ ಸೆಳೆತಕ್ಕೆ ಸಿಲುಕಿ ಒಬ್ಬರ ಹಿಂದೆ ಒಬ್ಬರಂತೆ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಉಳಿದ ಮೂವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








