ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣಕ್ಕೆ ಕೇರಳದ ನಂಟು ಪತ್ತೆಯಾಗಿದ್ದು, ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ತನಿಖೆಯ ವೇಳೆ ಕೇರಳ ಮೂಲದ ಸಿ.ಕೆ. ಬಲರಾಜ್ ಎಂಬ ವ್ಯಕ್ತಿಯ ಹೆಸರು ಮುನ್ನೆಲೆಗೆ ಬಂದಿದೆ ಎನ್ನಲಾಗಿದೆ. ಈತನಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ, ಆತ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಯಾಗಿದೆ. ಈತ ಮಾಜಿ ಕಾಂಗ್ರೆಸ್ ನಾಯಕಿ ಕೃಪಾ ಆಳ್ವಾ ಅವರ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.
ಸ್ಟಿಂಗ್ ಆಪರೇಷನ್ನಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯನ್ನು ಕೃಪಾ ಆಳ್ವಾ ಅವರಿಗೆ ಪರಿಚಯಿಸಿದ್ದು ಇದೇ ವ್ಯಕ್ತಿ ಎನ್ನಲಾಗುತ್ತಿದೆ. ಕೃಪಾ ಆಳ್ವಾ ಅವರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಬಲರಾಜ್ ಅವರ ಕಚೇರಿಯಲ್ಲಿ ಭಾಷಾಂತರಕಾರನಾಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
ಬಳಿಕ ಈ ವ್ಯಕ್ತಿಯ ಮೂಲಕವೇ ಸ್ಟಿಂಗ್ ಆಪರೇಷನ್ನಲ್ಲಿದ್ದ ಮಹಿಳೆ ಕೃಪಾ ಆಳ್ವಾ ಅವರನ್ನು ಸಂಪರ್ಕಿಸಿದ್ದಳು ಎನ್ನಲಾಗಿದೆ. ಆದರೆ, ಮಹಿಳೆ ಮತ್ತು ಬಲರಾಜ್ ನಡುವೆ ಇದ್ದ ಸಂಪರ್ಕದ ಸ್ವರೂಪವೇನು? ಮಹಿಳೆಯನ್ನು ಕೃಪಾ ಆಳ್ವಾ ಅವರ ಬಳಿಗೆ ಕರೆತಂದಿದ್ದು ಇದೇ ವ್ಯಕ್ತಿಯೇ? ಎಂಬ ಅಂಶಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ವಿಡಿಯೋ ಸೃಷ್ಟಿ, ಅದರ ಹಿಂದಿನ ಉದ್ದೇಶ ಹಾಗೂ ಪ್ರಸರಣದ ಹಿಂದಿರುವವರ ಪಾತ್ರದ ಬಗ್ಗೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಾಹಿತಿ ಬಹಿರಂಗವಾಗುವ ನಿರೀಕ್ಷೆಯಿದೆ.








