ವಿಟ್ಲ: ವನ್ಯಜೀವಿ ಉತ್ಪನ್ನವಾದ ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಮಾರಾಟಕ್ಕಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಮಕೃಷ್ಣ ಅವರು ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.
ದಿನಾಂಕ 24-06-2026 ರಂದು ರಾತ್ರಿ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಬೋಳಂತಿಮೊಗರು ಎಂಬಲ್ಲಿ ಸ್ಕೂಟರ್‌ವೊಂದನ್ನು ತಡೆದು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸ್ಕೂಟರ್‌ನಲ್ಲಿದ್ದ ಬಂಟ್ವಾಳ ಕರೋಪಾಡಿ ನಿವಾಸಿ ಕುಮುದಾಕ್ಷ (27) ಹಾಗೂ ಬಂಟ್ವಾಳ ವಿಟ್ಲ ಕಸಬಾ ನಿವಾಸಿ ಧನು ಕುಮಾರ್ (32) ಅವರನ್ನು ವಿಚಾರಣೆ ನಡೆಸಲಾಗಿದೆ.
ವಿಚಾರಣೆ ವೇಳೆ ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಸಾಗಿಸುತ್ತಿದ್ದ ಸುಮಾರು 5.73 ಗ್ರಾಂ ತೂಕದ ವಸ್ತುವನ್ನು ಹಾಜರುಪಡಿಸಿದ್ದು, ಅದು ಅಂಬರ್‌ಗ್ರೀಸ್ (ತಿಮಿಂಗಿಲ ವಾಂತಿ) ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಂದಿನ ಕಾನೂನು ಕ್ರಮಕ್ಕಾಗಿ ಅಂಬರ್‌ಗ್ರೀಸ್, ಆರೋಪಿಗಳ ಬಳಿಯಿದ್ದ 2 ಮೊಬೈಲ್ ಫೋನ್‌ಗಳು ಹಾಗೂ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 140/2026, ಕಲಂ: 51 THE WILD LIFE (PROTECTION) ACT, 1972 ಹಾಗೂ ಕಲಂ: 3(5) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.








