ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಬಳಿ ಸೋಮವಾರ ಬೆಳಗ್ಗಿನ ಜಾವ ಕೇರಳ ಮೂಲದ ಪ್ರಮುಖ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿದ 7-8 ಮಂದಿ ದರೋಡೆಕೋರರ ತಂಡ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಕೇರಳದ ಪಯ್ಯನ್ನೂರು ನಿವಾಸಿ, ಉದ್ಯಮಿ ವಿಕಾಸ್ ಎಂಬುವರು ಪತ್ನಿ ಮತ್ತು ಮಗನೊಂದಿಗೆ ಮುಂಬೈನಲ್ಲಿ ನಡೆದಿದ್ದ ಸ್ನೇಹಿತನೊಬ್ಬನ ಮದುವೆ ಸಮಾರಂಭ ಮುಗಿಸಿಕೊಂಡು ಸ್ವಗ್ರಾಮಕ್ಕೆ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ಈ ಕೃತ್ಯ ನಡೆದಿದೆ. ಸೋಮವಾರ ಬೆಳಗ್ಗಿನ ಜಾವ ಸುಮಾರು 2:30ರ ಸುಮಾರಿಗೆ ಉದ್ಯಮಿ ವಿಕಾಸ್ ಅವರ ಕಾರು ಬೈಕಂಪಾಡಿಯ ದ್ವಾರ ಹೋಟೆಲ್ ಸಮೀಪ ತಲುಪುತ್ತಿದ್ದಂತೆ, ಮೂರು ಕಾರುಗಳಲ್ಲಿ ಹೊಂಚು ಹಾಕಿ ಬಂದಿದ್ದ ಸುಮಾರು 7 ರಿಂದ 8 ಮಂದಿ ದರೋಡೆಕೋರರು ವಿಕಾಸ್ ಅವರ ಕಾರನ್ನು ಬಲವಂತವಾಗಿ ರಸ್ತೆ ಮಧ್ಯೆಯೇ ತಡೆದು ನಿಲ್ಲಿಸಿದ್ದಾರೆ. ತಕ್ಷಣವೇ ಕಾರಿನ ಬಳಿ ಬಂದ ದರೋಡೆಕೋರರು ವಿಕಾಸ್ ಅವರನ್ನು ಬಲತ್ಕಾರವಾಗಿ ಕೆಳಕ್ಕೆ ಇಳಿಸಿ, ಕಾರಿನಲ್ಲಿದ್ದ ಅವರ ಪತ್ನಿ ಹಾಗೂ ಮಗನನ್ನು ಅದೇ ಕಾರಿನ ಸಮೇತ ಅಪಹರಿಸಿಕೊಂಡು ಅತಿ ವೇಗವಾಗಿ ಅಲ್ಲಿಂದ ಪರಾರಿಯಾಗಿದ್ದಾರೆ.
ವಿಕಾಸ್ ಅವರ ಪತ್ನಿ ಮತ್ತು ಮಗನನ್ನು ಅಪಹರಿಸಿದ ದರೋಡೆಕೋರರು ಅವರನ್ನು ಪಣಂಬೂರು ಬೀಚ್ ರಸ್ತೆಯ ನಿರ್ಜನ ಪ್ರದೇಶದ ಬಳಿ ಕರೆದೊಯ್ದಿದ್ದಾರೆ. ಅಲ್ಲಿ ತಾಯಿ ಮತ್ತು ಮಗ ಇಬ್ಬರನ್ನೂ ಹೆದರಿಸಿ, ಅವರ ಬಳಿಯಿದ್ದ ಚಿನ್ನಾಭರಣ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಬಳಿಕ ಅವರಿಬ್ಬರನ್ನೂ ನಡುರಸ್ತೆಯಲ್ಲೇ ಬಿಟ್ಟು, ಉದ್ಯಮಿಯ ಕಾರಿನೊಂದಿಗೆ ದರೋಡೆಕೋರರ ತಂಡ ಪರಾರಿಯಾಗಿದೆ.
ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಉದ್ಯಮಿ ವಿಕಾಸ್ ಅವರು ಪಣಂಬೂರು ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ದೂರಿನ ಅನ್ವೇಷಣೆಯಲ್ಲಿ ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ದರೋಡೆಕೋರರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.








