ಮಂಗಳೂರು: ನಗರದಲ್ಲಿ ಭಾನುವಾರ ದಿನವಿಡೀ ಸುರಿದ ಭಾರಿ ಮಳೆಯ ಪರಿಣಾಮವಾಗಿ ಬೆಂದೂರಿನ ಖಾಸಗಿ ಶಾಲೆಯೊಂದರ ಮುಂಭಾಗದಲ್ಲಿದ್ದ ಬೃಹತ್ ಮರವೊಂದು ತಡರಾತ್ರಿ ರಸ್ತೆಗೆ ಉರುಳಿ ಬಿದ್ದ ಘಟನೆ ನಡೆದಿದೆ. ಆದರೆ ಘಟನೆ ಮಧ್ಯರಾತ್ರಿ ಸಂಭವಿಸಿದ್ದರಿಂದ ಯಾವುದೇ ವಾಹನ ಅಥವಾ ಜನರು ಇಲ್ಲದ ಕಾರಣ ಪ್ರಾಣಾಪಾಯ ಹಾಗೂ ಆಸ್ತಿಪಾಸ್ತಿ ಹಾನಿ ತಪ್ಪಿದೆ.
ಮಾಹಿತಿಯ ಪ್ರಕಾರ, ಸೋಮವಾರ ಬೆಳಗಿನ ಜಾವ ಸುಮಾರು 2 ಗಂಟೆಯ ವೇಳೆಗೆ ಮಣ್ಣು ಸಡಿಲಗೊಂಡ ಪರಿಣಾಮ ಮರವು ಬೇರುಸಹಿತ ಕಿತ್ತು ಬಿದ್ದು ಶಾಲೆಯ ಮುಂಭಾಗದ ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿತು. ಕಳೆದ ಒಂದು ದಿನದಿಂದ ಸುರಿದ ನಿರಂತರ ಮಳೆಯೇ ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಪಾಂಡೇಶ್ವರ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ಆರಂಭಿಸಿದರು. ಕತ್ತಲೆಯ ನಡುವೆಯೂ ಆಧುನಿಕ ಯಂತ್ರೋಪಕರಣಗಳ ನೆರವಿನಿಂದ ಮರವನ್ನು ತುಂಡುಗಳಾಗಿ ಕತ್ತರಿಸಿ ರಸ್ತೆಯಿಂದ ತೆರವುಗೊಳಿಸಲಾಯಿತು. ಇದರಿಂದ ಬೆಳಗಿನ ವೇಳೆಗೆ ಶಾಲಾ ವಾಹನಗಳು ಹಾಗೂ ಸಾರ್ವಜನಿಕ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗದಂತೆ ರಸ್ತೆ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
ಇದೇ ವೇಳೆ ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಇನ್ನೂ ಮುಂದುವರಿದಿದ್ದು, ಜುಲೈ 1 ಮತ್ತು 2ರಂದು ವ್ಯಾಪಕ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.








