ಸುಳ್ಯ:ಸುಳ್ಯದ ಸರಕಾರಿ ಆಸ್ಪತ್ರೆಯ ಪಕ್ಕದ ರಿಕ್ಷಾ ನಿಲ್ದಾಣದ ಎದುರಿನಿಂದ ಜೂನಿಯರ್ ಕಾಲೇಜಿಗೆ ತೆರಳುವ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ ತೆರವುಗೊಳಿಸದೆ ಕಾಂಕ್ರೀಟ್ ರಸ್ತೆ ನಿರ್ಮಿಸಿರುವ ಘಟನೆ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ರಸ್ತೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಸ್ತೆ ನಿರ್ಮಾಣದ ವೇಳೆ ವಿದ್ಯುತ್ ಕಂಬವನ್ನು ಮಧ್ಯದಲ್ಲೇ ಉಳಿಸಿಕೊಂಡು ಅದರ ಸುತ್ತಲೂ ಕಾಂಕ್ರೀಟ್ ಹಾಕಲಾಗಿದ್ದು, ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುವುದರ ಜೊತೆಗೆ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರಿಂದಲೂ ಈ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.
ಸ್ಥಳ ಪರಿಶೀಲನೆ ವೇಳೆ ರಸ್ತೆ ಮತ್ತು ಮೆಸ್ಕಾಂ ಅಧಿಕಾರಿಗಳನ್ನು ಕರೆಸಿಕೊಂಡ ಶಾಸಕಿ, ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೆ ರಸ್ತೆ ನಿರ್ಮಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಇಂತಹ ರೀತಿಯಲ್ಲಿ ಕಂಬಗಳನ್ನು ಉಳಿಸಿಕೊಂಡು ರಸ್ತೆ ನಿರ್ಮಿಸಿರುವುದು ಅಪಾಯಕಾರಿ ಹಾಗೂ ಅವೈಜ್ಞಾನಿಕ ಕ್ರಮವಾಗಿದೆ. ಮೆಸ್ಕಾಂ ಮತ್ತು ಗುತ್ತಿಗೆದಾರರು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿ, ರಸ್ತೆಯ ಮಧ್ಯದಲ್ಲಿರುವ ಕಂಬಗಳನ್ನು ತಕ್ಷಣ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಸೂಚನೆ ನೀಡಿದರು.
ಅನುಮತಿ ಪಡೆಯದೇ ರಸ್ತೆ ನಿರ್ಮಾಣ ಮಾಡಿರುವ ಲೇಔಟ್ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಾಸಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.








