ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೊಕ್ಕಬೆಟ್ಟು ಪ್ರದೇಶದಲ್ಲಿ ಜೂನ್ 26 ಹಾಗೂ 27ರ ಮುಂಜಾನೆ ಅವಧಿಯಲ್ಲಿ ನಡೆದಿದ್ದ ಎರಡು ಸರಣಿ ಚಿನ್ನದ ಸರ ಕಳವು ಪ್ರಕರಣಗಳನ್ನು ಸುರತ್ಕಲ್ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ವಿಶೇಷ ಪೊಲೀಸ್ ತಂಡ ಕುಖ್ಯಾತ ಆರೋಪಿಯನ್ನು ಬಂಧಿಸುವುದರ ಜೊತೆಗೆ, ಕಳವಾಗಿದ್ದ ಸಂಪೂರ್ಣ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಂಧಿತನನ್ನು ಕಾಟಿಪಳ್ಳ 2ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಅಬ್ದುಲ್ ಜಾಫರ್ (28) ಎಂದು ಗುರುತಿಸಲಾಗಿದೆ. ಜೂನ್ 29ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಜಂಕ್ಷನ್ ಸಮೀಪ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಸುರತ್ಕಲ್ ಪೊಲೀಸರ ವಿಶೇಷ ತಂಡ ಆರೋಪಿಯನ್ನು ಬಂಧಿಸಿತು.
ಮೊದಲ ಘಟನೆ (ಜೂನ್ 26):
ಜೂನ್ 26ರ ಮುಂಜಾನೆ ಚೊಕ್ಕಬೆಟ್ಟು ಅಜಾದ್ ನಗರದ 2ನೇ ಬ್ಲಾಕ್‌ನಲ್ಲಿರುವ ತಮ್ಮ ಮನೆಯಲ್ಲಿ ಶ್ರೀಮತಿ ಜಾಹೀದ್ ಮಲಗಿದ್ದ ವೇಳೆ, ಮನೆಯ ಕಿಟಕಿಯ ಮೂಲಕ ಕೈ ಹಾಕಿದ ಆರೋಪಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ನಡೆದ ಎಳೆದಾಟದಲ್ಲಿ ಸರ ತುಂಡಾಗಿ, ಸುಮಾರು ₹20,000 ಮೌಲ್ಯದ ಚಿನ್ನದ ಭಾಗವನ್ನು ಕಸಿದುಕೊಂಡು ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಎರಡನೇ ಘಟನೆ (ಜೂನ್ 27):
ಮೊದಲ ಘಟನೆಯ ಮರುದಿನವೇ, ಜೂನ್ 27ರಂದು ಬೆಳಗ್ಗೆ ಸುಮಾರು 5 ಗಂಟೆ ವೇಳೆಗೆ ಚೊಕ್ಕಬೆಟ್ಟು 8ನೇ ಬ್ಲಾಕ್‌ನಲ್ಲಿ ಮತ್ತೊಂದು ಕೃತ್ಯ ನಡೆದಿತ್ತು. ಮನೆಯ ಮಾಲೀಕರಾದ ಫಯಾಜ್ ಮಸೀದಿಗೆ ತೆರಳಿದ್ದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಆರೋಪಿ, ಮನೆಯೊಳಗೆ ನುಗ್ಗಿ ನಿದ್ರಿಸುತ್ತಿದ್ದ ಶ್ರೀಮತಿ ಅಫ್ರೀನಾ ಅವರ ಕುತ್ತಿಗೆಯಲ್ಲಿದ್ದ ಸುಮಾರು ₹1 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿದ್ದ.
ಸತತ ಎರಡು ದಿನ ನಡೆದ ಈ ಸರ ಕಳವು ಪ್ರಕರಣಗಳು ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು ಸಿಸಿಟಿವಿ ದೃಶ್ಯಾವಳಿ, ತಾಂತ್ರಿಕ ಮಾಹಿತಿ ಹಾಗೂ ಸ್ಥಳೀಯ ಮೂಲಗಳಿಂದ ಲಭಿಸಿದ ಸುಳಿವುಗಳ ಆಧಾರದಲ್ಲಿ ಕ್ಷಿಪ್ರ ತನಿಖೆ ನಡೆಸಿ ಕೇವಲ 48 ಗಂಟೆಗಳೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಮೊಹಮ್ಮದ್ ಅಬ್ದುಲ್ ಜಾಫರ್ ಈ ಹಿಂದೆಯೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಅಡಿಯಲ್ಲಿ ಗಂಭೀರ ಹಲ್ಲೆ ಪ್ರಕರಣ ಹಾಗೂ ಉರ್ವಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಅಡಿಯಲ್ಲಿ ಕೊಲೆ ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ ಎಂದು ತಿಳಿದುಬಂದಿದೆ.
ಬಂಧಿತನಿಂದ ಎರಡೂ ಪ್ರಕರಣಗಳಲ್ಲಿ ಕಳವಾಗಿದ್ದ ಎಲ್ಲಾ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.








