ಕಾಸರಗೋಡು : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿದೇಶಕ್ಕೆ ಹೊಸ ಉದ್ಯೋಗ ಅರಸಿ ದೇಶ ಬಿಟ್ಟು ಪರಾರಿಯಾಗಲು ಕೇವಲ ಎರಡು ದಿನಗಳು ಬಾಕಿ ಇರುವಾಗ ಕಾಮುಕ ಆಟೋರಿಕ್ಷಾ ಚಾಲಕನನ್ನು ವಿದ್ಯಾನಗರ ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿದ್ದಾರೆ. ಕುಂಬಳ ಮೂಲದ ಅಬು ತಾಹಿರ್ (32) ಬಂಧಿತ ಆರೋಪಿ.
ಬಂಧಿತ ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಪ್ರಸ್ತುತ ಆತನ ಪತ್ನಿ ಗರ್ಭಿಣಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಗಂಭೀರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಅಬು ತಾಹಿರ್ ಹಾಗೂ ಆತನ ಕುಟುಂಬ ಈ ಹಿಂದೆ ವಿದ್ಯಾನಗರದಲ್ಲಿದ್ದ ಸಂತ್ರಸ್ತೆಯ ಮನೆಯ ಬಳಿಯೇ ಬಾಡಿಗೆಗೆ ವಾಸವಿದ್ದರು. ಈ ಅವಧಿಯಲ್ಲಿ (2022 ರಿಂದ 2023 ರ ನಡುವೆ) ಸಂತ್ರಸ್ತೆಗೆ ಕೇವಲ 16 ವರ್ಷ ವಯಸ್ಸಾಗಿದ್ದಾಗ ಆರೋಪಿ ಆಕೆಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ. 2023 ರಲ್ಲಿ ಈತ ತನ್ನ ಕುಟುಂಬದೊಂದಿಗೆ ಕುಂಬಳಕ್ಕೆ ಶಿಫ್ಟ್ ಆಗಿದ್ದರೂ, ಬಾಲಕಿಯೊಂದಿಗೆ ಸತತವಾಗಿ ಫೋನ್ ಸಂಪರ್ಕದಲ್ಲಿದ್ದ. ಇತ್ತೀಚೆಗೆ ಪ್ರಸ್ತುತ 19 ವರ್ಷದ ಯುವತಿಯಾಗಿರುವ ಸಂತ್ರಸ್ತೆ ತೀವ್ರ ಅಸ್ವಸ್ಥಗೊಂಡಿದ್ದಾಳೆ. ಆಕೆಯ ವರ್ತನೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಮೊಬೈಲ್ ಫೋನ್ ಪರಿಶೀಲಿಸಿದಾಗ ಅಬು ತಾಹಿರ್ ಜೊತೆಗಿನ ಚಾಟ್ಗಳು ಮತ್ತು ಕರೆ ದಾಖಲೆಗಳು ಪತ್ತೆಯಾಗಿವೆ. ತಕ್ಷಣವೇ ಪೋಷಕರು ಯುವತಿಯನ್ನು ವೃತ್ತಿಪರ ಸಮಾಲೋಚನೆಗೆ (Professional Counseling) ಒಳಪಡಿಸಿದಾಗ ತಾನು ಎದುರಿಸಿದ್ದ ಭೀಕರ ಲೈಂಗಿಕ ದೌರ್ಜನ್ಯವನ್ನು ಆಕೆ ಕಣ್ಣೀರಿಡುತ್ತಾ ಬಿಚ್ಚಿಟ್ಟಿದ್ದಾಳೆ.
ಬಾಲಕಿಯ ಕೌನ್ಸೆಲಿಂಗ್ ಹೇಳಿಕೆಯ ಆಧಾರದ ಮೇಲೆ ಪೋಷಕರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣದ ಗಂಭೀರತೆ ಅರಿತ ವಿದ್ಯಾನಗರ ಇನ್ಸ್ಪೆಕ್ಟರ್ ನೇತೃತ್ವದ ವಿಶೇಷ ತಂಡ ತಕ್ಷಣವೇ ಕಾರ್ಯಾಚರಣೆ ನಡೆಸಿ ಕುಂಬಳದಲ್ಲಿ ಅಬು ತಾಹಿರ್ನನ್ನು ಹೆಡೆಮುರಿ ಕಟ್ಟಿದೆ. ತನಿಖೆಯ ವೇಳೆ ಆರೋಪಿಯು ಜುಲೈ 5 ರಂದು ಗಲ್ಫ್ ದೇಶಕ್ಕೆ ಹಾರಲು ವೀಸಾ ಮತ್ತು ವಿಮಾನದ ಟಿಕೆಟ್ ಬುಕ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಕೇವಲ ಎರಡು ದಿನ ಮುಂಚಿತವಾಗಿ ಅಂದ್ರೆ ಜುಲೈ 3 ರಂದು ಈತನನ್ನು ಲಾಕ್ ಮಾಡದಿದ್ದರೆ ಈತ ವಿದೇಶಕ್ಕೆ ಹಾರಿ ತಲೆಮರೆಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.








