ಉಡುಪಿ: ಜಂಟಿ ರಿಯಲ್ ಎಸ್ಟೇಟ್ ಹೂಡಿಕೆಯ ಹೆಸರಿನಲ್ಲಿ ₹70 ಲಕ್ಷ ಪಡೆದು ವಂಚನೆ ಎಸಗಿರುವುದಲ್ಲದೆ, ಅಶ್ಲೀಲ ವಿಡಿಯೋಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಉಡುಪಿ ನಗರ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಬಂಧಿತೆಯನ್ನು ಜೀನತ್ ಇಬ್ರಾಹಿಂ ಎಂದು ಗುರುತಿಸಲಾಗಿದ್ದು, ಪಡುಬಿದ್ರೆ ಸಮೀಪದ ಕಂಚಿನಡ್ಕದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ರಿಯಲ್ ಎಸ್ಟೇಟ್ ಪಾಲುದಾರಿಕೆ ಹೆಸರಿನಲ್ಲಿ ಕೋಟ್ಯಂತರ ವ್ಯವಹಾರ
ದೂರುದಾರರೊಂದಿಗೆ ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಪರಿಚಯ ಬೆಳೆಸಿಕೊಂಡಿದ್ದ ಆರೋಪಿತೆ, ಬಳಿಕ ಉಡುಪಿಯಲ್ಲಿ ಜಂಟಿಯಾಗಿ ಕಚೇರಿ ಆರಂಭಿಸಿದ್ದಳು ಎನ್ನಲಾಗಿದೆ. ಈ ಸಂದರ್ಭದಲ್ಲಿ ಜಮೀನು ಖರೀದಿಗೆ ಹೂಡಿಕೆ ಮಾಡುವುದಾಗಿ ಹೇಳಿ ದೂರುದಾರರಿಂದ ₹70 ಲಕ್ಷ ಪಡೆದುಕೊಂಡಿದ್ದಾಳೆ. ಆದರೆ, ಆ ಹಣವನ್ನು ವ್ಯವಹಾರಕ್ಕೆ ಬಳಸದೇ ತನ್ನ ವೈಯಕ್ತಿಕ ಉದ್ದೇಶಗಳಿಗೆ ಬಳಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 79/2026ರಡಿ ಬಿಎನ್‌ಎಸ್‌ನ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಹಣ ವಾಪಸ್ ಕೇಳುತ್ತಿದ್ದಂತೆ ಬೆದರಿಕೆ ಆರೋಪ
ಹೂಡಿಕೆ ಮಾಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಆರೋಪಿತೆ ದೂರುದಾರರ ಹೊಸ ಕಚೇರಿಗೆ ತೆರಳಿ ಮತ್ತಷ್ಟು ಹಣಕ್ಕೆ ಒತ್ತಾಯಿಸಿದ್ದಾಳೆ ಎನ್ನಲಾಗಿದೆ. ಹಣ ನೀಡದಿದ್ದರೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ತನ್ನ ಬಳಿ ದೂರುದಾರರ ಖಾಸಗಿ ಹಾಗೂ ಅಶ್ಲೀಲ ವಿಡಿಯೋಗಳಿವೆ ಎಂದು ಹೇಳಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ದೂರುದಾರರ ಪತ್ನಿ ಮತ್ತು ಮಕ್ಕಳನ್ನು ಅಪಹರಿಸಿ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಸಬೀನಾ ಇಲಿಯಾಸ್ ಸೇರಿದಂತೆ ಇನ್ನೂ ಕೆಲವರು ಅಕ್ರಮ ಹಣ ವಸೂಲಿ ಜಾಲದಲ್ಲಿ ಭಾಗಿಯಾಗಿರುವ ಶಂಕೆಯನ್ನೂ ದೂರುದಾರರು ವ್ಯಕ್ತಪಡಿಸಿದ್ದಾರೆ.
ರಹಸ್ಯ ಪೆನ್‌ಡ್ರೈವ್‌ಗಳಲ್ಲಿ ಪ್ರಭಾವಿಗಳ ವಿಡಿಯೋಗಳು?
ಪ್ರಕರಣದ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ದೂರುದಾರರು ತಮ್ಮ ಹಳೆಯ ಕಚೇರಿಯಿಂದ ಕೆಲವು ಪೆನ್‌ಡ್ರೈವ್‌ಗಳು ಮತ್ತು ರಹಸ್ಯ ದಾಖಲೆಗಳನ್ನು ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ಅವುಗಳಲ್ಲಿ ಹಲವು ಪ್ರಭಾವಿ ವ್ಯಕ್ತಿಗಳು ಹಾಗೂ ಉದ್ಯಮಿಗಳ ಖಾಸಗಿ ಮತ್ತು ಅಶ್ಲೀಲ ವಿಡಿಯೋಗಳು ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದೆ.
ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ, ಈ ವಿಡಿಯೋಗಳನ್ನು ತೋರಿಸಿ ಹಲವರಿಂದ ಹಣ ವಸೂಲಿ ಮಾಡಿರುವ ಸಾಧ್ಯತೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಈ ಸಂಬಂಧ ಕಾಂಗ್ರೆಸ್‌ನ ಸ್ಥಳೀಯ ಮುಖಂಡ ಸೇರಿದಂತೆ ಕೆಲ ಉದ್ಯಮಿಗಳ ಹೆಸರುಗಳೂ ಕೇಳಿಬರುತ್ತಿದ್ದು, ತನಿಖೆಯ ಬಳಿಕವೇ ನಿಖರ ಸತ್ಯಾಂಶ ಹೊರಬೀಳಲಿದೆ.
ಸಾರ್ವಜನಿಕರಿಗೆ ಮನವಿ
ಈ ಮಹಿಳೆಯಿಂದ ಇದೇ ರೀತಿಯ ವಂಚನೆ, ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿರುವವರು ಇದ್ದರೆ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರಿದಿದೆ.








