ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಕೀಟನಾಶಕ ತಯಾರಿಸಿ ಮಾರಾಟ ಮಾಡುತ್ತಿದ್ದ ಭಾರಿ ಜಾಲವೊಂದನ್ನು ಚಿಕ್ಕಬಳ್ಳಾಪುರದಲ್ಲಿ ಕೃಷಿ ಇಲಾಖೆಯ ಜಾಗೃತ ದಳ ಬಯಲಿಗೆಳೆದಿದೆ. ನಗರದ ವಸತಿ ಮನೆಯೊಂದರ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಅಪಾರ ಪ್ರಮಾಣದ ನಕಲಿ ಕೀಟನಾಶಕ ಹಾಗೂ ಪ್ಯಾಕಿಂಗ್ ಸಾಮಗ್ರಿಗಳನ್ನು ಜಪ್ತಿ ಮಾಡಿದ್ದಾರೆ.
ನಡೆದಿದ್ದೇನು?
ಅವಧಿ ಮೀರಿದ ಕೃಷಿ ರಾಸಾಯನಿಕಗಳನ್ನು ಅಪಾಯಕಾರಿಯಾಗಿ ಮಿಶ್ರಣ ಮಾಡಿ, ಸುಮಾರು 11 ರಿಂದ 12 ಪ್ರಮುಖ ಕಂಪನಿಗಳ ನಕಲಿ ಲೇಬಲ್ ಹಾಗೂ ಹುಸಿ ಜಿಎಸ್‌ಟಿ (GST) ಸಂಖ್ಯೆ ಬಳಸಿ ರೈತರಿಗೆ ಮಾರಾಟ ಮಾಡಲಾಗುತ್ತಿತ್ತು. ದಾಳಿಯ ವೇಳೆ 200 ಲೀಟರ್‌ಗೂ ಹೆಚ್ಚು ನಕಲಿ ರಾಸಾಯನಿಕಗಳು, ಬಾಟಲಿಗಳು ಮತ್ತು ಲೇಬಲ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ರೈತರೇ ಇವನ ಟಾರ್ಗೆಟ್!
ಆರೋಪಿ ಸೋಮಸುಂದರ್ ತಾನೊಬ್ಬ ‘ಬೆಳೆ ತಜ್ಞ’ ಎಂದು ಹೇಳಿಕೊಂಡು ದ್ರಾಕ್ಷಿ, ಮಾವು, ದಾಳಿಂಬೆ ಬೆಳೆಯುವ ತೋಟಗಾರಿಕಾ ರೈತರ ವಿಶ್ವಾಸ ಗಳಿಸುತ್ತಿದ್ದ. ಪ್ರತಿದಿನ 50 ಲೀಟರ್‌ಗೂ ಹೆಚ್ಚು ನಕಲಿ ಉತ್ಪನ್ನ ತಯಾರಿಸಿ, ನೇರವಾಗಿ ರೈತರ ಜಮೀನುಗಳಿಗೆ ತೆರಳಿ ಮಾರಾಟ ಮಾಡುತ್ತಿದ್ದ. ವಿಚಾರಣೆ ವೇಳೆ ತಾನು ನಕಲಿ ಕೀಟನಾಶಕ ತಯಾರಿಸುತ್ತಿದ್ದುದನ್ನು ಒಪ್ಪಿಕೊಂಡಿರುವ ಆರೋಪಿ, ಕಳೆದ ಮೂರು ದಿನಗಳಿಂದಷ್ಟೇ ಇದನ್ನು ಮಾಡುತ್ತಿದ್ದಾಗಿ ಸಮಜಾಯಿಷಿ ನೀಡಿದ್ದಾನೆ.
ಕೃಷಿ ಇಲಾಖೆ ಎಚ್ಚರಿಕೆ
ಇಂತಹ ನಕಲಿ ರಾಸಾಯನಿಕ ಬಳಕೆಯಿಂದ ಬೆಳೆ ನಾಶವಾಗುವುದಲ್ಲದೆ, ಮಣ್ಣಿನ ಫಲವತ್ತತೆ ಹಾಗೂ ಪರಿಸರಕ್ಕೂ ತೀವ್ರ ಹಾನಿಯಾಗುತ್ತದೆ. ಆದ್ದರಿಂದ ರೈತರು ಅಧಿಕೃತ ರಸೀದಿಯೊಂದಿಗೆ ಮಾನ್ಯತೆ ಪಡೆದ ಅಂಗಡಿಗಳಿಂದಷ್ಟೇ ಕೀಟನಾಶಕ ಖರೀದಿಸಬೇಕೆಂದು ಕೃಷಿ ಜಾಗೃತ ದಳದ ಅಧಿಕಾರಿ ಮೋಹನ್ ಮನವಿ ಮಾಡಿದ್ದಾರೆ. ಈ ಕುರಿತು ಚಿಕ್ಕಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.








