ಮಂಗಳೂರು: ಬೈಕಂಪಾಡಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಚೇರಿಯಲ್ಲಿ ಗ್ರೂಪ್ ‘ಡಿ’ ಗುತ್ತಿಗೆ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಎಪಿಎಂಸಿ ಕಾರ್ಯದರ್ಶಿ ಸಿ.ಹೆಚ್. ಮೋಹನ್ ಅವರನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ನೇತೃತ್ವದ ಮಹಿಳಾ ತಂಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕಳೆದ ಎರಡೂವರೆ ವರ್ಷಗಳಿಂದ ₹15,000 ವೇತನಕ್ಕೆ ದುಡಿಯುತ್ತಿರುವ ಇಬ್ಬರು ಮಕ್ಕಳ ತಾಯಿಯಾಗಿರುವ ಸಂತ್ರಸ್ತೆಗೆ, ತನ್ನ ಲೈಂಗಿಕ ಬೇಡಿಕೆಗೆ ಒಪ್ಪಿದರೆ ವೇತನವನ್ನು ₹25,000ಕ್ಕೆ ಏರಿಸುವುದಾಗಿ ಮೋಹನ್ ಆಮಿಷ ಒಡ್ಡಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಕಚೇರಿ ಕೆಲಸದಿಂದ ತೆಗೆದು ಶೌಚಾಲಯ ಶುಚಿಗೊಳಿಸುವ ಕೆಲಸಕ್ಕೆ ಹಾಕಲಾಗಿತ್ತು. ಕಳೆದ ಶನಿವಾರ ಕರೆ ಮಾಡಿದ್ದ ಅಧಿಕಾರಿಯು, ತನ್ನ ಬೇಡಿಕೆಗೆ ಸಮ್ಮತಿ ಇದ್ದರೆ ಸೋಮವಾರ ಹಸಿರು ಬಣ್ಣದ ಸೀರೆ ಉಟ್ಟು ಬರಬೇಕೆಂದು ಷರತ್ತು ವಿಧಿಸಿದ್ದ ಎಂದು ಆರೋಪಿಸಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಪ್ರತಿಭಾ ಕುಳಾಯಿ ನೇತೃತ್ವದಲ್ಲಿ ಹಲವು ಮಹಿಳೆಯರು ಹಸಿರು ಸೀರೆ ಧರಿಸಿ ‘ಗ್ರೀನ್ ಗ್ಯಾಂಗ್’ ಆಗಿ ಎಪಿಎಂಸಿ ಕಚೇರಿಗೆ ದಿಢೀರ್ ದಾಳಿ ನಡೆಸಿದರು. ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಣಂಬೂರು ಠಾಣೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಂತ್ರಸ್ತೆಯಿಂದ ದೂರು ಪಡೆದು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಸಂತ್ರಸ್ತೆಯ ಕೆಲಸಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ನೀಡಲಾಗಿದೆ.








