ಲಿಮಾ: ಪೆರುವಿನ ನಾಜ್ಕಾ ನಗರದ ಹೊರ ವಲಯದಲ್ಲಿ ಪ್ರವಾಸಿಗರಿದ್ದ ವಿಮಾನ ಪತನಗೊಂಡ ಪರಿಣಾಮ 13 ಮಂದಿ ಮೃತಪಟ್ಟಿದ್ದಾರೆ.
ರಾಜಧಾನಿ ಲಿಮಾದಿಂದ ದಕ್ಷಿಣಕ್ಕೆ ಸುಮಾರು 240 ಕಿಲೋಮೀಟರ್ ದೂರದಲ್ಲಿರುವ ಪಿಸ್ಕೋ ವಿಮಾನ ನಿಲ್ದಾಣದಿಂದ ವಿಮಾನವು ಟೇಕಾಫ್ ಆದ ಸ್ವಲ್ಪ ಸಮಯದ ನಂತರ ಈ ಅವಘಡ ಸಂಭವಿಸಿದೆ. ಈ ದುರಂತದಲ್ಲಿ 11 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ವಿಮಾನ ಅವಘಡಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಪೆರುವಿನ ನಾಗರಿಕ ವಿಮಾನಯಾನ ಪ್ರಾಧಿಕಾರವು ತನಿಖೆ ನಡೆಸಲಿದ್ದು, ಅಧಿಕಾರಿಗಳು ಈಗಾಗಲೇ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಮೃತರ ಪೈಕಿ 11 ಪ್ರಯಾಣಿಕರು ವಿದೇಶಿಗರಾಗಿದ್ದಾರೆ. 7 ಮಂದಿ ಇಟಾಲಿಯನ್ನರು, ಇಬ್ಬರು ಜರ್ಮನ್ನರು ಮತ್ತು ಇಬ್ಬರು ಸ್ಪೇನ್ ದೇಶದವರು ಸಾವನ್ನಪ್ಪಿದ್ದಾರೆ ಎಂದು ವಿದೇಶಿ ವ್ಯವಹಾರ ಸಚಿವಾಲಯ ತಿಳಿಸಿದೆ.








