ನವದೆಹಲಿ: ಪಾಕಿಸ್ತಾನದ ಗುಪ್ತಚರ ಅಧಿಕಾರಿಯೊಬ್ಬರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಭಾರತೀಯ ವಾಯುಪಡೆಯ ರಕ್ಷಣಾ ಸಂಬಂಧಿತ ಅತ್ಯಂತ ಸೂಕ್ಷ್ಮ ಹಾಗೂ ಕಾರ್ಯತಂತ್ರದ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಭಾರತೀಯ ವಾಯುಪಡೆ(ಐಎಎಫ್)ಯ ವಿಂಗ್ ಕಮಾಂಡರ್ ಹುದ್ದೆಯ ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಐಎಎಫ್ ನೀಡಿದ ದೂರಿನ ಮೇರೆಗೆ, ಪಾಕಿಸ್ತಾನಕ್ಕೆ ರಕ್ಷಣಾ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇಲೆ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ಬಂಧಿಸಲಾಗಿದೆ. ಅಧಿಕೃತ ರಹಸ್ಯ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೇ 30 ರಂದು ಅವರನ್ನು ಬಂಧಿಸಲಾಗಿದೆ. ತನಿಖೆ ಪೂರ್ಣಗೊಂಡ ನಂತರ ಜುಲೈ 30 ರಂದು ನ್ಯಾಯಾಲಯದ ಮುಂದೆ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣವು ಕೇವಲ ವ್ಯಕ್ತಿಗತ ಕೃತ್ಯವಲ್ಲದೆ, ಕಾರ್ಯತಂತ್ರದ ಮಿಲಿಟರಿ ಗುಪ್ತಚರವನ್ನು ಗುರಿಯಾಗಿಸಿಕೊಂಡಿರುವ ದೊಡ್ಡ ಮಟ್ಟದ ಅಂತರರಾಷ್ಟ್ರಿಯ ಬೇಹುಗಾರಿಕೆ ಜಾಲದ ಭಾಗವಾಗಿರಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ಮೂಲಕ ಅಧಿಕಾರಿಯನ್ನು ಮಹಿಳೆಯೊಬ್ಬರು ಸಂಪರ್ಕ ಸಾಧಿಸಿದ್ದಾರೆ. ಚಾಟ್‌ಗಳು ಮತ್ತು ವಿಡಿಯೋ ಕರೆಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದ ಮಹಿಳೆ ಅಧಿಕಾರಿಯ ವಿಶ್ವಾಸ ಗಳಿಸಿದ್ದಾರೆ. ಬಳಿಕ ಆಕೆಯ ಕೋರಿಕೆಯಂತೆ ಸೇನಾ ಪಡೆಗಳ ಚಲನವಲನಗಳು, ನಿಯೋಜನೆಗಳು, ಫೋಟೋಗಳು ಮತ್ತು ವೀಡಿಯೊಗಳಂತಹ ಸೂಕ್ಷ್ಮ ದತ್ತಾಂಶಗಳನ್ನು ಹಂಚಿಕೊಳ್ಳಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಕೇವಲ ಅಧಿಕಾರಿಯಷ್ಟೆ ಅಲ್ಲದೆ, ಮತ್ತೊಬ್ಬ ಸಹೋದ್ಯೊಗಿಯ ಮೊಬೈಲ್ ಫೋನ್‌ನಲ್ಲಿ ನಿರ್ದಿಷ್ಟ ಅಪ್ಲಿಕೇಶನ್ ಒಂದನ್ನು ಇನ್‌ಸ್ಟಾಲ್ ಮಾಡಲು ಸೂಚಿಸಲಾಗಿದೆ. ಇದು ಡೇಟಾ ಕದಿಯಲು, ಲೊಕೇಶನ್ ಟ್ರ‍್ಯಾಕ್ ಮಾಡಲು ಹಾಗೂ ಸಂವಹನಗಳನ್ನು ಪ್ರತಿಬಂಧಿಸಲು ಬಳಸುವ ಸ್ಪೈವೇರ್ ಅಥವಾ ರಿಮೋಟ್-ಆಕ್ಸೆಸ್ ಮಾಲ್‌ವೇರ್ ಆಗಿತ್ತು. ಪಾಕ್ ಮೂಲದ ಹ್ಯಾಂಡ್‌ಲರ್‌ಗಳ ನಂಟು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಕ್ಕೆ ಬಂದ ಆ ಮಹಿಳೆ, ತೆರೆಮರೆಯಲ್ಲಿ ಪಾಕ್‌ನ ಹ್ಯಾಂಡ್‌ಲರ್‌ಗಳ ನಿರ್ದೇಶನದಂತೆ ಕಾರ್ಯನಿರ್ವಹಿಸುತ್ತಿದ್ದಳು ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿದೆ.








