ಶಿವಮೊಗ್ಗ: ಆಗುಂಬೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರ ಕಳಚಿ ಬಿದ್ದ ಘಟನೆ ನಡೆದಿದೆ. ಚಕ್ರ ಕಳಚುತ್ತಿದ್ದಂತೆ ಎಚ್ಚೆತ್ತ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದಾರೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಬಸ್ ಉಡುಪಿಯಿಂದ – ಶಿವಮೊಗ್ಗಕ್ಕೆ ಬರುತ್ತಿತ್ತು. ಉಡುಪಿಯಿಂದ ಘಾಟ್ ಹತ್ತಿ, ಆಗುಂಬೆ ಬಳಿ ಬಂದಾಗ ಬಸ್ನ ಚಕ್ರ ಕಳಚಿದೆ. ಫೋಟೋದಲ್ಲಿ ಚಕ್ರ ಕಳಚಿ ಬಿದ್ದ ಜಾಗದಿಂದ ಸುಮಾರು 50 ಮೀಟರ್ ದೂರದಲ್ಲಿ ಬಸ್ ನಿಂತಿರುವುದನ್ನು ನೋಡಬಹುದಾಗಿದೆ.
ಬಸ್ಸಿನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ ನಿಧಾನಗತಿಯಲ್ಲಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಅಕಸ್ಮಾತ್ ಘಾಟಿಯಲ್ಲಿದ್ದಾಗ ಅಥವಾ ವೇಗವಾಗಿದ್ದಾಗ ಈ ಅವಘಡ ಆಗಿದ್ದರೆ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.








