ಕಾರ್ಕಳ : ನೂತನ ಮನೆ ಬಿಟ್ಟುಕೊಡುವ ವಿಚಾರವಾಗಿ ಆರಂಭವಾದ ಕುಟುಂಬ ಜಗಳ ವಿಕೋಪಕ್ಕೆ ತಿರುಗಿ, ತಂದೆಯೊಬ್ಬ ತನ್ನ ಮಗನನ್ನೇ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆಗೆ ಯತ್ನಿಸಿರುವ ಘಟನೆ ಕಾರ್ಕಳ ತಾಲೂಕಿನ ತೆಳ್ಳಾರು ದುರ್ಗಾ ಗ್ರಾಮದ ಪುಲ್ಲಾಟ್ ಎಂಬಲ್ಲಿ ಸೆಪ್ಟೆಂಬರ್ 28 ರಂದು ರಾತ್ರಿ ನಡೆದಿದೆ. ಘಟನೆಯಲ್ಲಿ ತೀವ್ರ ರಕ್ತಗಾಯಗೊಂಡಿರುವ ಪುಲ್ಲಾಟ್ ನಿವಾಸಿ ಚಾಲ್ಸ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಗಾಯಾಳು ಚಾಲ್ಸ್ ಮದ್ಯಪಾನ ಚಟಕ್ಕೆ ಒಳಗಾಗಿದ್ದು, ಅವರ ಪತ್ನಿ 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದ್ಯ ತಮ್ಮ ತಂದೆ ಮಥಾಯ್, ತಾಯಿ ತ್ರೆಸಿಯಾಮ್ ಹಾಗೂ ಮಗಳೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಹಳೆ ಮನೆಯ ಸಮೀಪದಲ್ಲಿಯೇ ತಂದೆ ಮಥಾಯ್ ಹೊಸ ಮನೆಯೊಂದನ್ನು ಕಟ್ಟಿಸುತ್ತಿದ್ದರು.
ಸೆಪ್ಟೆಂಬರ್ . 28 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಚಾಲ್ಸ್ ತಮ್ಮ ತಾಯಿ ತ್ರೆಸಿಯಾಮ್ ಜೊತೆ ಜಗಳ ತೆಗೆದು, “ಹೊಸದಾಗಿ ಕಟ್ಟುತ್ತಿರುವ ಮನೆಯನ್ನು ನನಗೇ ಬಿಟ್ಟುಕೊಡಬೇಕು” ಎಂದು ಗಲಾಟೆ ಮಾಡುತ್ತಿದ್ದರು.
ಜಗಳ ಬಿಡಿಸಲು ತಂದೆ ಮಥಾಯ್ ಮಧ್ಯಪ್ರವೇಶಿಸಿದಾಗ, ಮಾತಿಗೆ ಮಾತು ಬೆಳೆದು ಆಯತಪ್ಪಿ ಮಥಾಯ್ ಕೆಳಗೆ ಬಿದ್ದಿದ್ದಾರೆ. ಬಳಿಕ ಮಥಾಯ್ ಎದ್ದು ಹೊಸದಾಗಿ ಕಟ್ಟುತ್ತಿರುವ ಮನೆಯ ಶೆಡ್ ಮುಂದೆ ಕುಳಿತುಕೊಂಡಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೂ ಬಂದ ಚಾಲ್ಸ್ ತಂದೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ರೊಚ್ಚಿಗೆದ್ದ ತಂದೆ ಮಥಾಯ್ ತಕ್ಷಣವೇ ಕತ್ತಿಯಿಂದ ಮಗ ಚಾಲ್ಸ್ನ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಕಡಿದು ಕೊಲೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರ ಗಾಯಗೊಂಡು ಕುಸಿದುಬಿದ್ದ ಚಾಲ್ಸ್ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣವೇ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗಾಯಾಳುವಿನ ತಂದೆ ಮಥಾಯ್ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಸೇರಿದಂತೆ ವಿವಿಧ ಗಂಭೀರ ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.








