ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಅಧಿಕೃತ ಸರ್ಕಾರಿ ನಿವಾಸದ ನಾಮಫಲಕದಲ್ಲಿ ಪತ್ನಿಯ ಹೆಸರನ್ನು ಪ್ರದರ್ಶಿಸಲಾಗಿದ್ದು, ಇದಕ್ಕೆ ಸರ್ಕಾರಿ ಅನುದಾನ ಬಳಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದ್ದಾರೆ.
ಅಧಿಕೃತ ನಿವಾಸವು ಹುದ್ದೆಯ ಆಧಾರದ ಮೇಲೆ ಹಂಚಿಕೆಯಾಗುವುದರಿಂದ, ನಾಮಫಲಕದಲ್ಲಿ ಅಧಿಕಾರಿಯ ಹೆಸರು ಮತ್ತು ಹುದ್ದೆ ಮಾತ್ರ ಇರುವುದು ಆಡಳಿತಾತ್ಮಕ ಶಿಷ್ಟಾಚಾರ. ಆದರೆ ಇಲ್ಲಿ ಸಂಗಾತಿಯ ಹೆಸರು ಸೇರಿಸಿರುವುದು ಸರ್ಕಾರಿ ನಿಯಮಾವಳಿಗಳಿಗೆ ವಿರುದ್ಧವಾಗಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಒಂದು ವೇಳೆ ಈ ನಾಮಫಲಕದ ತಯಾರಿಕೆ ಮತ್ತು ಅಳವಡಿಕೆಗೆ ಸಾರ್ವಜನಿಕ ಹಣ ವಿನಿಯೋಗವಾಗಿದ್ದರೆ, ಅದು ನಿಯಮಬಾಹಿರವಾಗುತ್ತದೆ. ಈ ಕುರಿತು ವೆಚ್ಚದ ದಾಖಲೆಗಳು, ಬಿಲ್‌ಗಳು ಹಾಗೂ ಶಿಷ್ಟಾಚಾರದ ಮಂಜೂರಾತಿಯನ್ನು ಪರಿಶೀಲಿಸಬೇಕು. ನಿಯಮ ಉಲ್ಲಂಘನೆಯಾಗಿದ್ದರೆ ನಾಮಫಲಕ ತೆರವುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಾದ್ಯಂತ ಸರ್ಕಾರಿ ನಿವಾಸಗಳಲ್ಲಿ ಏಕರೂಪದ ಮಾರ್ಗಸೂಚಿ ಹೊರಡಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ








