ತೆಲಂಗಾಣ: ವೇದಮಂತ್ರಗಳ ಸಮ್ಮುಖದಲ್ಲಿ ಏಳು ಹೆಜ್ಜೆ ತುಳಿದು, ಅಗ್ನಿಸಾಕ್ಷಿಯಾಗಿ ವಿವಾಹವಾದ ಪತಿಯನ್ನೇ ಕೊಲೆ ಮಾಡಲು ಪತ್ನಿಯೊಬ್ಬಳು ಪ್ರಿಯಕರನ ಜೊತೆ ಸೇರಿ ಸಂಚು ರೂಪಿಸಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಅಪಘಾತದ ರೂಪದಲ್ಲಿ ಕೊಲೆ ಮಾಡಬೇಕು, ಇಲ್ಲವಾದರೆ ತಾನೇ ಕೊಲ್ಲುವುದಾಗಿ ಪತ್ನಿ ಕಳುಹಿಸಿದ್ದ ಸಂದೇಶಗಳನ್ನು ಕಂಡು ತನಿಖಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.
ಡೋರ್ನಕಲ್ ಮಂಡಲದ ಚಿಲುಕೋಡು ಗ್ರಾಮದ ನಿವಾಸಿ, ಖಾಸಗಿ ಆಸ್ಪತ್ರೆ ಉದ್ಯೋಗಿ ಗಾಡೆ ರಾಜೇಶ್ವರರಾವ್ ಅವರಿಗೆ 2016ರಲ್ಲಿ ಭವಾನಿ ಎಂಬುವವರೊಂದಿಗೆ ವಿವಾಹವಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ರಾಜೇಶ್ವರರಾವ್ ಕಳೆದ ತಿಂಗಳ 27 ರಂದು ಮಧ್ಯಾಹ್ನ ಮನೆಗೆ ಹೋದಾಗ, ಪತ್ನಿ ಭವಾನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಆತ್ಮೀಯವಾಗಿರುವುದನ್ನು ಕಂಡು ಅನುಮಾನಗೊಂಡಿದ್ದರು.
ಮರುದಿನ ಈ ಕುರಿತು ಪಂಚಾಯಿತಿ ನಡೆಸಲು ಹಿರಿಯರನ್ನು ಕರೆತರಲು ತೆರಳುತ್ತಿದ್ದಾಗ, ಪ್ರಿಯಕರ ಪುರಿಮೆಟ್ಲ ಸೈದುಲು ರಾಜೇಶ್ವರರಾವ್ ಅವರನ್ನು ಹಿಂಬಾಲಿಸಿದ್ದ. ಆತನನ್ನು ಹಿಡಿಯಲು ಯತ್ನಿಸಿದಾಗ ಆತ ಪರಾರಿಯಾಗಿದ್ದ
ಬಳಿಕ ಪತ್ನಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಆಕೆಯ ವಿವಾಹೇತರ ಸಂಬಂಧ ಹಾಗೂ ಕೊಲೆ ಸಂಚಿನ ಬಂಡವಾಳ ಬಯಲಾಗಿದೆ. ಅದರಲ್ಲಿ ಪತಿಯನ್ನು ಮನೆಯೊಳಗೆ ಕೊಲೆ ಮಾಡಬಾರದು. ಹೊರಗೆ ಯಾರಾದರೂ ವಾಹನದಿಂದ ಅಪಘಾತ ಮಾಡಿಸಿ ಕೊಲೆ ಮಾಡಬೇಕು ಎಂದು ಆಕೆ ಒತ್ತಡ ಹೇರಿದ್ದಳು ಎನ್ನಲಾಗಿದೆ. ಅಲ್ಲದೆ ನೀನು ಆತನನ್ನು ಕೊಂದು ಹಾಕದಿದ್ದರೆ ನಾನೇ ಆತನನ್ನು ಕೊಲ್ಲುತ್ತೇನೆ ಎಂದು ಪತ್ನಿ ಮೆಸೇಜ್ ಮಾಡಿದ್ದಾಳೆ ಎಂದು ಪತಿ ಚಾಟಿಂಗ್ ತೋರಿಸಿದ್ದಾನೆ. ಪತ್ನಿ ತನ್ನ ಪ್ರಿಯಕರನಿಗೆ ಕಳುಹಿಸಿದ್ದ ಚಾಟ್‌ಗಳ ನಕಲು ಪ್ರತಿಗಳನ್ನು ರಾಜೇಶ್ವರರಾವ್ ಪೊಲೀಸರಿಗೆ ಸಲ್ಲಿಸಿದ್ದಾರೆ. ತಮಗೂ ಹಾಗೂ ತಮ್ಮ ಇಬ್ಬರು ಹೆಣ್ಣುಮಕ್ಕಳಿಗೂ ಪ್ರಾಣಭೀತಿ ಇರುವುದಾಗಿ ರಕ್ಷಣೆ ಕೋರಿದ್ದಾರೆ.
ಡೋರ್ನಕಲ್ ಪೊಲೀಸ್ ಠಾಣೆಯಲ್ಲಿ ಪ್ರಥಮವಾಗಿ ‘ಝೀರೋ ಎಫ್‌ಐಆರ್’ ದಾಖಲಿಸಲಾಗಿದ್ದು, ನಂತರ ಪ್ರಕರಣವನ್ನು ಖಮ್ಮಂ ಗ್ರಾಮೀಣ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಖಮ್ಮಂ ಗ್ರಾಮೀಣ ಸಿಐ ಮುಷ್ಕರಾಜು ಅವರು ದೂರು ಸ್ವೀಕರಿಸಿ ತನಿಖೆ ಆರಂಭಿಸಿದ್ದಾರೆ. ಸದ್ಯ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಾದ ಭವಾನಿ ಹಾಗೂ ಸೈದುಲುಗಾಗಿ ಪೊಲೀಸರು ಜಾಲ ಬೀಸಿದ್ದಾರೆ.








