ಮಣಿಪಾಲ: ರಸ್ತೆ ಬದಿಯ ಮರಕ್ಕೆ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ 21 ವರ್ಷದ ಯುವಕ ಮೃತಪಟ್ಟ ದಾರುಣ ಘಟನೆ ಹೆರ್ಗ ಗ್ರಾಮದ ಕೆಳಪರ್ಕಳ ಇಳಿಜಾರಿನಲ್ಲಿರುವ ಗೋಪಾಲಕೃಷ್ಣ ದೇವಸ್ಥಾನದ ಬಳಿ ಮಂಗಳವಾರ ನಸುಕಿನ ಜಾವ 1.25ರ ಸುಮಾರಿಗೆ ನಡೆದಿದೆ.
ಮೃತರನ್ನು ಆತ್ರಾಡಿ ನಿವಾಸಿ ಸನತ್ (21) ಎಂದು ಗುರುತಿಸಲಾಗಿದೆ. ಸನತ್ ಅವರು ಗೆಳೆಯರೊಂದಿಗೆ ಮಣಿಪಾಲದಲ್ಲಿ ರಾತ್ರಿ ಊಟ ಮುಗಿಸಿ, ಬಳಿಕ ಗೆಳೆಯ ಆಶಿಶ್ ಅವರ ಬುಲೆಟ್ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ.
ಮಣಿಪಾಲ ಕಡೆಯಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಕೆಳಪರ್ಕಳ ಇಳಿಜಾರಿನಲ್ಲಿ ಸಾಗುತ್ತಿದ್ದ ವೇಳೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರನ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸನತ್ ಅವರು ಬುಲೆಟ್ ಸಮೇತ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಸನತ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








