ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಸಾಗರ್ ಅದಾನಿ ಅವರ ವಿರುದ್ಧದ ಎಲ್ಲಾ ಕ್ರಿಮಿನಲ್ ಮತ್ತು ವಂಚನೆ ಆರೋಪಗಳನ್ನು ಅಮೆರಿಕದ ನ್ಯಾಯಾಲಯವು ಅಧಿಕೃತವಾಗಿ ವಜಾಗೊಳಿಸಿದೆ. ಈ ಮಹತ್ವದ ತೀರ್ಪನ್ನು ಗೌತಮ್ ಅದಾನಿ ಅವರು ಸ್ವಾಗತಿಸಿದ್ದಾರೆ.
ನ್ಯಾಯಾಲಯದ ಈ ಆದೇಶ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಗೌತಮ್ ಅದಾನಿ, “ಅಮೆರಿಕ ನ್ಯಾಯಾಲಯದ ತೀರ್ಪನ್ನು ನಾನು ವಿನಮ್ರತೆಯಿಂದ ಸ್ವಾಗತಿಸುತ್ತೇನೆ. ಈ ಇಡೀ ಸವಾಲಿನ ಅವಧಿಯಲ್ಲಿ, ಸತ್ಯ, ನಿಷ್ಪಕ್ಷಪಾತ ಮತ್ತು ಕಾನೂನಿನ ಆಡಳಿತದ ಮೇಲಿನ ನಮ್ಮ ನಂಬಿಕೆ ಎಂದಿಗೂ ಅಲುಗಾಡಲಿಲ್ಲ” ಎಂದು ಬರೆದುಕೊಂಡಿದ್ದಾರೆ.
“ನಮ್ಮ ಮೇಲೆ, ವ್ಯವಸ್ಥೆಯ ಮೇಲೆ ಮತ್ತು ಭಾರತದ ನ್ಯಾಯ ಒದಗಿಸುವ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ದೇಶದ ನಿರ್ಮಾಣ, ಮೌಲ್ಯವರ್ಧನೆ ಮತ್ತು ಸ್ವಾರ್ಥ ಮೀರಿದ ಸಾಮಾಜಿಕ ಸೇವೆಗಾಗಿ ನಮ್ಮ ಬದ್ಧತೆ ಎಂದಿನಂತೆ ಮುಂದುವರಿಯಲಿದೆ. ಜೈ ಹಿಂದ್” ಎಂದು ಪೋಸ್ಟ್ ಮಾಡಿದ್ದಾರೆ.
“ಮುಂದೆಯೂ ಮಹತ್ವದ ಕೆಲಸವನ್ನೇ ಮುಂದುವರಿಸುತ್ತೇವೆ. ನಮ್ಮ ದೇಶಕ್ಕಾಗಿ ನಿರ್ಮಿಸುತ್ತೇವೆ, ನಮ್ಮ ನಂತರವೂ ಉಳಿಯುವ ಮೌಲ್ಯವನ್ನು ಸೃಷ್ಟಿಸುತ್ತೇವೆ ಮತ್ತು ನಮಗಿಂತಲೂ ದೊಡ್ಡ ಉದ್ದೇಶಕ್ಕಾಗಿ ಸೇವೆ ಸಲ್ಲಿಸುತ್ತೇವೆ. ಇದೇ ನಮ್ಮ ಬದ್ಧತೆ” ಎಂದು ತಿಳಿಸಿದ್ದಾರೆ.
2023ರ ಜನವರಿಯಲ್ಲಿ ಪ್ರಸ್ತುತ ಕಾರ್ಯಾಚರಣೆ ಸ್ಥಗಿತಗೊಳಿಸಿರುವ ಶಾರ್ಟ್ ಸೆಲ್ಲರ್ ಸಂಸ್ಥೆ ಹಿಂಡೆನ್ಬರ್ಗ್ ರಿಸರ್ಚ್ ಅದಾನಿ ಸಮೂಹದ ವಿರುದ್ಧ ಹಲವು ಆರೋಪಗಳನ್ನು ಮಾಡಿತ್ತು. ಆ ಬಳಿಕ ಅದಾನಿ ಸಮೂಹದ ಮೇಲೆ ತೀವ್ರ ಪರಿಶೀಲನೆ ಆರಂಭವಾಗಿತ್ತು.








