ನವದೆಹಲಿ:ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಬಿಗ್ ಶಾಕ್ ಎದುರಾಗಿದೆ. ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಕರ್ನಾಟಕಕ್ಕೆ ಸೂಚಿಸಿದೆ.
ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಇದರೊಂದಿಗೆ, ಮುಂಗಾರು ಮಳೆ ಕೊರತೆ ಎದುರಿಸುತ್ತಿರುವ ಕರ್ನಾಟಕಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ತಮಿಳುನಾಡು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ, CWMA ಆದೇಶ ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
CWMA ಕರ್ನಾಟಕದಿಂದ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬರುತ್ತಿಲ್ಲ ಎಂದು ತಮಿಳುನಾಡು ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದೆ. ನಿತ್ಯ ಕೇವಲ 5ರಿಂದ 6 ಸಾವಿರ ಕ್ಯೂಸೆಕ್‌ನಷ್ಟು ನೀರು ಬರುತ್ತಿದ್ದು, ಈವರೆಗೆ ಸುಮಾರು 13ರಿಂದ 14 ಟಿಎಂಸಿ ನೀರು ಮಾತ್ರ ಲಭಿಸಿದೆ ಎಂದು ತಮಿಳುನಾಡು ತನ್ನ ವಾದದಲ್ಲಿ ತಿಳಿಸಿದೆ.
ಕರ್ನಾಟಕದ ಪರವಾಗಿ, ಈಗಾಗಲೇ 3,500 ಕ್ಯೂಸೆಕ್ ನೀರು ಹರಿಸಲಾಗಿದೆ ಎಂದು ತಿಳಿಸಲಾಗಿದೆ. CWMA ಆದೇಶವನ್ನು ಪಾಲಿಸಲು ರಾಜ್ಯ ಪ್ರಯತ್ನಿಸುತ್ತಿದೆ ಎಂದು ವಾದಿಸಲಾಗಿದೆ. ಬಿಳಿಗುಂಡ್ಲು ಬಳಿ ನೀರಿನ ಪ್ರಮಾಣವನ್ನು ಅಳೆಯಲಾಗುತ್ತದೆ. 12 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಅಲ್ಲಿ ದಾಖಲಾಗಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಕರ್ನಾಟಕದ ಪರ ವಾದ ಮಂಡಿಸಲಾಗಿದೆ.
ಅಂತಿಮವಾಗಿ, CWMA ನೀಡಿರುವ ಆದೇಶವನ್ನು ಪಾಲಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಸೂಚಿಸಿದ್ದು, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವ ನಿರ್ದೇಶನ ಮುಂದುವರಿದಿದೆ. ಪ್ರಕರಣದ ಮುಂದಿನ ವಿಚಾರಣೆ ಸೋಮವಾರ ನಡೆಯಲಿದೆ.








