ಚಿತ್ರದುರ್ಗ: ಕಳೆದ ಶುಕ್ರವಾರ ಮದುವೆಯಾದ ದಿನವೇ ನವ ವಿವಾಹಿತೆ ನಾಪತ್ತೆಯಾಗಿದ್ದಳು. ಮೂರು ದಿನಗಳ ಬಳಿಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರ ತನಿಖೆಯಲ್ಲಿ ಗಂಡನ ಸ್ನೇಹಿತರಿಂದಲೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು ಬೆಳಕಿಗೆ ಬಂದಿದ್ದು, ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಪೊಲೀಸರು ಇಬ್ಬರು ಹಂತಕರನ್ನು ಬಂಧಿಸಿದ್ದಾರೆ.
ಆರೋಪಿ ಬೋರಯ್ಯ ಹಾಗೂ ಕಾರಯ್ಯ ಎಂಬ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಸ್ನೇಹಿತನಿಗೆ ಗೆಳೆಯರೇ ನಿಂತು ಬೆಳಗ್ಗೆ ಮದುವೆ ಮಾಡಿಸಿದ್ದರು
ಆರೋಪಿಗಳಾದ ಬೋರಯ್ಯ ಮತ್ತು ಕಾರಯ್ಯ ಕಳೆದ ಶುಕ್ರವಾರ ತಮ್ಮ ಸ್ನೇಹಿತನಾದ ಗಜೇಂದ್ರನ ಪ್ರೇಮ ವಿವಾಹವನ್ನು ಮುಂದೆ ನಿಂತು ಮಾಡಿಸಿದ್ದರು. ಆದ್ರೆ, ಅದೇ ದಿನ ರಾತ್ರಿ ಪಾಪಿಗಳು ನೀಚ ಕೃತ್ಯವನ್ನು ಎಸಗಿದ್ದಾರೆ. ಸ್ನೇಹಿತನ ಹೆಂಡತಿ ಅಂತಲೂ ನೋಡದೇ ಕಾಮುಕರಂತೆ ಇಬ್ಬರು ಎರಗಿದ್ದಾರೆ. ನವವಿವಾಹಿತೆಯನ್ನು ಎನ್.ಮಹದೇವಪುರ ಬಳಿ ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಕೊಲೆ ಪ್ರಕರಣ ಮುಚ್ಚಿ ಹಾಕಲು ಶವವನ್ನು ಬಾವಿಗೆ ಎಸೆದಿದ್ದಾರೆ. ಮೂರು ದಿನಗಳ ಬಳಿಕ ಶವ ಪತ್ತೆಯಾಗಿತ್ತು. ಕೊಲೆ ಅನುಮಾನ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.








