ಉತ್ತರ ಪ್ರದೇಶ : : ಕಳೆದ ನಾಲ್ಕು ತಿಂಗಳಲ್ಲಿ 10 ಪ್ರತ್ಯೇಕ ಪ್ರಕರಣಗಳಲ್ಲಿ ಬರೋಬ್ಬರಿ 22 ಮಂದಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಕಠಿಣ ತೀರ್ಪು ನೀಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರ ನ್ಯಾಯಾಲಯದಲ್ಲಿದ್ದ ಸುಮಾರು 100 ಕೊಲೆ ಪ್ರಕರಣಗಳನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. ಆಡಳಿತಾತ್ಮಕ ಆದೇಶದ ಮೂಲಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಪೀಠಕ್ಕೆ ಈ ಪ್ರಕರಣಗಳನ್ನು ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಸತತವಾಗಿ ಮರಣದಂಡನೆ ಶಿಕ್ಷೆ ವಿಧಿಸುತ್ತಿದ್ದ ಪ್ರಮಾಣದ ಕುರಿತು ವಕೀಲರು ಹಾಗೂ ಕಕ್ಷಿದಾರರಲ್ಲಿ ತೀವ್ರ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣಗಳನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಮೋದ್ ತ್ಯಾಗಿ ಸ್ಪಷ್ಟಪಡಿಸಿದ್ದಾರೆ.
2022ರಲ್ಲಿ ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೊಗ್ರಫಿ ಸಮೀಕ್ಷೆಗೆ ಆದೇಶ ನೀಡಿ ದೇಶದಾದ್ಯಂತ ಗಮನ ಸೆಳೆದಿದ್ದ ರವಿಕುಮಾರ್ ದಿವಾಕರ್ ಅವರು, ತಮ್ಮ ಕಠಿಣ ತೀರ್ಪುಗಳಿಗೆ ಹೆಸರಾಗಿದ್ದಾರೆ. ಪ್ರಸ್ತುತ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಒಳಪಡುವ ಈ 100 ಕೊಲೆ ಪ್ರಕರಣಗಳನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವೀರೇಂದ್ರ ಕುಮಾರ್ ಸಿಂಗ್ ಅವರ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ.








