ಮಂಗಳೂರು: ಉಳ್ಳಾಲದ ಕೋಟೆಪುರ ಸಮುದ್ರ ತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಶವ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಮೀನುಗಾರಿಕಾ ಬೋಟ್‌ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರೆಂದು ಶಂಕಿಸಲಾಗಿದ್ದ ವ್ಯಕ್ತಿಯ ಸಾವಿನ ಹಿಂದೆ ಕೊಲೆ ನಡೆದಿರುವ ಸಾಧ್ಯತೆ ಮರಣೋತ್ತರ ಪರೀಕ್ಷೆಯಲ್ಲಿ ಬೆಳಕಿಗೆ ಬಂದಿದೆ.
ಆಗಸ್ಟ್ 17ರಂದು ಕೋಟೆಪುರ ಮಸೀದಿ ಹಿಂಭಾಗದ ಕಡಲ ಕಿನಾರೆಯಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿತ್ತು. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಈ ವೇಳೆ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣದ ಆಧಾರದ ಮೇಲೆ ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ನಾರಾಯಣ ಅವರ ಕುಟುಂಬಸ್ಥರನ್ನು ಕರೆಸಲಾಗಿತ್ತು.
ನಾರಾಯಣ ಅವರು ಆಗಸ್ಟ್ 3ರಂದು ಮಂಗಳೂರಿನ ಮೀನುಗಾರರೊಂದಿಗೆ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಆಗಸ್ಟ್ 9ರಂದು ವಾಪಸ್ ಬರುತ್ತಿದ್ದ ವೇಳೆ ನೇತ್ರಾವತಿ ನದಿ ಸೇರುವ ಅಳಿವೆ ಬಾಗಿಲಿನಲ್ಲಿ ಅಲೆಯ ಹೊಡೆತಕ್ಕೆ ಸಿಲುಕಿ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಈ ಕುರಿತು ಅವರ ಸಹೋದರ ಕೃಷ್ಣಪ್ಪ ಅವರು ಆಗಸ್ಟ್ 10ರಂದು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಶವದ ತಲೆಬುರುಡೆಗೆ ಹರಿತ ಆಯುಧ ಹಾಗೂ ಸುತ್ತಿಗೆಯಂತಹ ವಸ್ತುವಿನಿಂದ ಹೊಡೆದಿರುವ ಗುರುತುಗಳು ಪತ್ತೆಯಾಗಿವೆ. ಮುಖದ ಗದ್ದ ಭಾಗ ಹಾಗೂ ಹೊಟ್ಟೆಯ ಭಾಗದಲ್ಲೂ ಹರಿತವಾದ ಆಯುಧಗಳಿಂದ ಉಂಟಾದ ಗಾಯಗಳು ಕಂಡುಬಂದಿವೆ. ಇದರಿಂದ ವ್ಯಕ್ತಿಯನ್ನು ಯಾರೋ ಹೊಡೆದು ಕೊಲೆಗೈದು ಬಳಿಕ ಸಮುದ್ರಕ್ಕೆ ಎಸೆದಿರಬಹುದೆಂಬ ಅನುಮಾನ ಪೊಲೀಸರಿಗೆ ಮೂಡಿದೆ.
ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಅಸಹಜ ಸಾವು ಪ್ರಕರಣವನ್ನು ಶಂಕಿತ ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹ ನಾರಾಯಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಸಹೋದರ ಕೃಷ್ಣಪ್ಪ ಅವರ ಮಾದರಿಯನ್ನು ಪಡೆದು ಡಿಎನ್‌ಎ ಪರೀಕ್ಷೆಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.
ಅಲ್ಲದೆ, ನಾರಾಯಣ ಅವರನ್ನು ಬೋಟ್‌ನಲ್ಲಿ ಕರೆದೊಯ್ದಿದ್ದ ಇತರ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ಪ್ರಕರಣದ ಸಂಪೂರ್ಣ ಹಿನ್ನೆಲೆ ಹಾಗೂ ವ್ಯಕ್ತಿಯ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.








