ಬೆಂಗಳೂರು: ಪೋಷಣೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದ ಮಲ ತಂದೆಯನ್ನು ಪುತ್ರ ಹತ್ಯೆಗೈದಿರುವ ಘಟನೆ ಮಾದನಾಯನಕಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಶಿವನಪುರ ನಿವಾಸಿ ಶ್ರೀಧರ್ (53) ಕೊಲೆಯಾದವರು. ಅವರ ಪುತ್ರ ಉದಯ್ ಕುಮಾರ್ (23) ಎಂಬಾತನನ್ನು ಬಂಧಿಸಲಾಗಿದೆ.
ಆ.19ರಂದು ಬೆಳಗ್ಗೆ ಶಿವನಪುರದ ಮನೆಯಲ್ಲಿ ದುರ್ಘಟನೆ ನಡೆದಿದೆ. ಈ ಸಂಬಂಧ ಶ್ರೀಧರ್ ಸಹೋದರ ಶಶಿಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಶ್ರೀಧರ್ ಹಿರಿಯ ಪತ್ರಕರ್ತರಾಗಿದ್ದು, ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಅವರ ಪತ್ನಿ ಪಂಜಾಬ್ ಮೂಲದ ಬೀನಾಗೆ ಈಗಾಗಲೇ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದಾರೆ. ಪುತ್ರ ಉದಯ್ ಜತೆ 16 ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಶ್ರೀಧರ್ ಪರಿಚಯವಾಗಿದೆ. ನಂತರ ಇಬ್ಬರು ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಶ್ರೀಧರ್, ಉದಯ್ ಕುಮಾರ್‌ನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದ್ದಾರೆ. ಆಧಾರ್ ಕಾರ್ಡ್ ಕೂಡ ಮಾಡಿಸಿಲ್ಲ.
3ನೇ ತರಗತಿ ನಂತರ ಶಾಲೆಗೂ ಕಳುಹಿಸಿಲ್ಲ. ಇದೀಗ ಕೆಲಸಕ್ಕೆ ಹೋಗುವುದಕ್ಕೂ ಬಿಡುವುದಿಲ್ಲ. ಆದರೆ, ಅವರ ಮಕ್ಕಳಿಗೆ ಮಾತ್ರ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ದೂರಿರುವ ಆರೋಪಿ, ಅದರಿಂದ ಕೋಪಗೊಂಡು ಬೈಕ್ ಶಾಕ್ ಅಬ್ಸರ್ ರಾಡ್‌ನಿಂದ ಶ್ರೀಧರ್ ತಲೆಗೆ ಹೊಡೆದು ಹತ್ಯೆಗೈದಿದ್ದೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








