ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಗರ್ಭಿಣಿ ಮಹಿಳಾ ಕಾನ್ಸ್ಟೇಬಲ್ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ನಡೆದ ಈ ಘಟನೆಯಲ್ಲಿ ಶಿಲ್ಪಾ ಎಂಬವರು ಗಂಭೀರ ಗಾಯಗೊಂಡಿದ್ದು, ಚೆನ್ನೈ ಮೂಲದ ಆರೋಪಿ ಗಜೇಂದ್ರನನ್ನು ಬಂಧಿಸಲಾಗಿದೆ. ಮೊಬೈಲ್ ಕಳೆದುಹೋಗಿದೆ ಎಂದು ದೂರು ನೀಡಲು ಮೆಜೆಸ್ಟಿಕ್ ರೈಲ್ವೆ ಪೊಲೀಸ್ ಠಾಣೆಗೆ ಬಂದಿದ್ದ ಗಜೇಂದ್ರನಿಗೆ, ಆ ಸಮಯದಲ್ಲಿ ಠಾಣೆಯಲ್ಲಿ ತಾವು ಒಬ್ಬರೇ ಇದ್ದುದರಿಂದ ಬೆಳಿಗ್ಗೆ ಬಂದು ದೂರು ನೀಡುವಂತೆ ಶಿಲ್ಪಾ ತಿಳಿಸಿದ್ದರು. ಆದರೆ, ಇದನ್ನು ಕೇಳಿ ಸಿಟ್ಟಾಗಿ ಹೋಗಿದ್ದ ಆತ ರಾಡ್ ತೆಗೆದುಕೊಂಡು ಬಂದು ಠಾಣೆಯಲ್ಲಿ ಕುಳಿತಿದ್ದ ಗರ್ಭಿಣಿ ಶಿಲ್ಪಾ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.








