ಕಾನ್ಪುರ : ಉತ್ತರ ಪ್ರದೇಶದ ಕಾನ್ಪುರದ ಗಂಗಾ ನದಿಯ ದಡದ ಬಳಿಯ ಹೊಲದಲ್ಲಿ ಗುರುವಾರ ತರಬೇತಿ ವಿಮಾನವೊಂದು ಪತನಗೊಂಡು ಕರ್ನಾಟಕ ಮೂಲದ ಪೈಲಟ್ ಸೇರಿದಂತೆ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ.
ಗಾರ್ಗ್ ಏವಿಯೇಷನ್ ತರಬೇತಿ ಸಂಸ್ಥೆಗೆ ಸೇರಿದ ಟ್ವಿನ್-ಎಂಜಿನ್ನ 4 ಆಸನಗಳ ತರಬೇತಿ ವಿಮಾನವು ಬೆಳಿಗ್ಗೆ 11:30 ಕ್ಕೆ ಉಡಾವಣೆಗೊಂಡಿತ್ತು. ತರಬೇತಿ ಮುಗಿಸಿ ಬೆಳಿಗ್ಗೆ 11:50 ರ ಸುಮಾರಿಗೆ ಸಂಸ್ಥೆಗೆ ಹಿಂತಿರುಗುತ್ತಿದ್ದಾಗ ವಿಮಾನ ನಿಯಂತ್ರಣ ಕಳೆದುಕೊಂಡು ದಿಢೀರ್ ಪತನಗೊಂಡಿದೆ.
ಅಪಘಾತದಲ್ಲಿ ಕರ್ನಾಟಕ ಮೂಲದ ಅಭಿಷೇಕ್ ಪೂಜಾರಿ ಹಾಗೂ ಗುಜರಾತ್ ಮೂಲದ ಸಚಿನ್ ಭಾಟಿಯಾ ಮೃತಪಟ್ಟಿದ್ದಾರೆ. ಇವರಲ್ಲಿ ಒಬ್ಬರು ತರಬೇತುದಾರರಾಗಿದ್ದು, ಮತ್ತೊಬ್ಬರು ಬೋಧಕರಾಗಿದ್ದರು. ಬೋಧಕರಿಗೆ ಸುಮಾರು 3,000 ಗಂಟೆಗಳ ಕಾಲ ವಿಮಾನ ಹಾರಾಟ ನಡೆಸಿದ ಅನುಭವವಿತ್ತು ಎಂದು ಕಾನ್ಪುರ ನಗರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ವಿಮಾನವು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ರೆಕ್ಕೆಗಳು ಹಾಗೂ ಲೋಹದ ಭಾಗಗಳು ಮುರಿದುಬಿದ್ದಿವೆ. ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತಂಡವು ಘಟನೆಯ ಸಂಪೂರ್ಣ ತನಿಖೆ ನಡೆಸಲಿದೆ. ಮೃತರ ಕುಟುಂಬಸ್ಥರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತೀವ್ರ ಕಂಬನಿ ಮಿಡಿದಿದ್ದಾರೆ.








