ಬೆಂಗಳೂರು: ನಗರದ ಕೆಂಚನಪುರ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದ ಜಾಲವನ್ನು ಕುಂಬಳಗೂಡು ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಯ ಹಿರಿಯ ವಿಶ್ಲೇಷಕ ಹಾಗೂ ಆತನ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ಬಸವೇಶ್ವರನಗರದ ಮೀನಾಕ್ಷಿನಗರ ನಿವಾಸಿ ಅಜಿತ್ ಬಿ. ನಾಯಕ್ (28) ಮತ್ತು ಹಾಸನದ ವರುಣ್ ಕೆ.ಆರ್. (25) ಎಂದು ಗುರುತಿಸಲಾಗಿದೆ. ಅಜಿತ್ ಸಿವಿಲ್ ಇಂಜಿನಿಯರಿಂಗ್ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ದೊಮ್ಲೂರು ಮೂಲದ ಖಾಸಗಿ ಸಂಸ್ಥೆಯಲ್ಲಿ ಹಿರಿಯ ವಿಶ್ಲೇಷಕನಾಗಿ ಕಾರ್ಯನಿರ್ವಹಿಸುತ್ತಿದ್ದ. ವರುಣ್ ಬಿಬಿಎ ಪದವೀಧರನಾಗಿದ್ದು, ಈ ಅಕ್ರಮ ಹುಕ್ಕಾ ಬಾರ್‌ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರೆಸಾರ್ಟ್‌ಗೆ ಹೋಗುವ ಬದಲು ಸ್ವಂತ ಬಾರ್ ಆರಂಭ!
ಪೊಲೀಸರ ತನಿಖೆಯ ವೇಳೆ ಆರೋಪಿಗಳು ನೀಡಿದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಅಜಿತ್ ಮತ್ತು ಆತನ ಸ್ನೇಹಿತರು ಹುಕ್ಕಾ ಸೇದಲು ನಿಯಮಿತವಾಗಿ ರಾಮನಗರಕ್ಕೆ ತೆರಳುತ್ತಿದ್ದರು. ಪ್ರತಿ ಬಾರಿಯೂ ತಲಾ 500 ರೂ. ಖರ್ಚಾಗುತ್ತಿದ್ದರಿಂದ, ತಾವೇ ಖಾಸಗಿಯಾಗಿ ಹುಕ್ಕಾ ಬಾರ್ ತೆರೆಯಲು ಯೋಜಿಸಿದ್ದರು. ಇದಕ್ಕಾಗಿ ಅನ್ನಪೂರ್ಣೇಶ್ವರರಿನಗರದಲ್ಲಿ ಬಂದ್ ಆಗಿದ್ದ ಹುಕ್ಕಾ ಬಾರ್ ಒಂದರಿಂದ ಅಗತ್ಯ ಉಪಕರಣಗಳು ಹಾಗೂ ಪ್ಲೇವರ್‌ಗಳನ್ನು ಖರೀದಿಸಿದ್ದರು. ಬಳಿಕ ಕೆಂಚನಪುರದಲ್ಲಿ ತಿಂಗಳಿಗೆ 13,000 ರೂ. ಬಾಡಿಗೆಗೆ ಮನೆಯ ಮೊದಲನೇ ಮಹಡಿಯನ್ನು ಪಡೆದು, ವಾರಾಂತ್ಯಗಳಲ್ಲಿ ಸ್ನೇಹಿತರಿಗೆ ಅಕ್ರಮವಾಗಿ ಹುಕ್ಕಾ ಪೂರೈಸಲು ಆರಂಭಿಸಿದ್ದರು.
ಪೊಲೀಸ್ ದಾಳಿ ಹಾಗೂ ವಸ್ತುಗಳ ವಶ
ಖಚಿತ ಮಾಹಿತಿ ಆಧರಿಸಿ ಕುಂಬಳಗೂಡು ಇನ್ಸ್‌ಪೆಕ್ಟರ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅಕ್ರಮ ಜಾಲ ಬಯಲಾಗಿದೆ. ದಾಳಿ ವೇಳೆ 5 ಹುಕ್ಕಾ ಪಾಟ್‌ಗಳು, 3 ಪೈಪ್‌ಗಳು, ಲೈಟರ್‌ಗಳು, ಚಾರ್ಕೋಲ್, ಫಾಯಿಲ್ ಶೀಟ್‌ಗಳು ಹಾಗೂ ಗ್ರಾಹಕರಿಂದ ಸಂಗ್ರಹಿಸಿದ್ದ 450 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಟ್ಟಡದ ಮಾಲೀಕರಿಗೆ ಈ ಅಕ್ರಮದ ಅರಿವಿತ್ತೇ ಎಂಬ ಬಗ್ಗೆ ಕುಂಬಳಗೂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








