ಉಡುಪಿ : ಬಟ್ಟೆ ಡಿಸೈನಿಂಗ್ ಸಂಸ್ಥೆ ಹೊಂದಿರುವ ಮಹಿಳೆಗೆ ಫ್ರಾಂಚೈಸಿ ಕೊಡುವುದಾಗಿ ನಂಬಿಸಿ, ಅವರ ಬ್ಯಾಂಕ್ ಖಾತೆಯನ್ನು ಸೈಬರ್ ಅಪರಾಧಕ್ಕೆ ದುರ್ಬಳಕೆ ಮಾಡಿಕೊಂಡು ಬಳಿಕ ಬೆದರಿಕೆಯೊಡ್ಡಿದ ಘಟನೆಗೆ ಸಂಬಂಧಿಸಿದಂತೆ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ಸಾರ್ಥಕ್ ಕಾರ್ ಎಕ್ಸೆಸ್ ಬಳಿಯ ಕುಂದ್ರಿಬೆಟ್ಟು ಕಂಪೌಂಡ್ ನಿವಾಸಿ ಲತೀಶ್ ಪೂಜಾರಿ (28) ಆರೋಪಿತ ವ್ಯಕ್ತಿಯಾಗಿದ್ದಾನೆ.
ಉಡುಪಿಯ ಪಲ್ಲವಿ ಎಂಬವರು ಬಟ್ಟೆ ಡಿಸೈನಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದು, 2024ರ ಜುಲೈ ತಿಂಗಳಲ್ಲಿ ಇವರನ್ನು ಸಂಪರ್ಕಿಸಿದ್ದ ಆರೋಪಿ ಲತೀಶ್ ಪೂಜಾರಿ, “ನಿಮ್ಮ ಸಂಸ್ಥೆಯನ್ನು ಕುಂದಾಪುರದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಸೋಣ, ನನಗೆ ಫ್ರಾಂಚೈಸಿ ನೀಡಿ” ಎಂದು ನಂಬಿಸಿದ್ದ. ಇದಕ್ಕೆ ಒಪ್ಪಿದ ಪಲ್ಲವಿ ಅವರ ಕೆವೈಸಿ (KYC) ದಾಖಲಾತಿಗಳನ್ನು ಪಡೆದುಕೊಂಡು ಕುಂದಾಪುರದ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ ಖಾತೆಯನ್ನು ತೆರೆಸಿದ್ದ.
ಬಳಿಕ, ಚಾಣಾಕ್ಷತನದಿಂದ ಆ ಬ್ಯಾಂಕ್ ಖಾತೆಗೆ ತನ್ನ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಂಡಿದ್ದ ಆರೋಪಿ, ಖಾತೆಯಲ್ಲಿ ನಡೆಯುತ್ತಿದ್ದ ಹಣದ ವ್ಯವಹಾರದ ಯಾವುದೇ ಮಾಹಿತಿಯನ್ನು ಪಲ್ಲವಿ ಅವರಿಗೆ ನೀಡಿರಲಿಲ್ಲ. ಈ ಖಾತೆಯನ್ನು ಸೈಬರ್ ಅಪರಾಧ ಕೃತ್ಯಗಳಿಗೆ ಬಳಸಿಕೊಂಡು, ಅವರಿಗೆ ನಂಬಿಕೆ ದ್ರೋಹ ಎಸಗಿದ್ದ.
ಖಾತೆಯ ದುರ್ಬಳಕೆ ಕುರಿತು ಅನುಮಾನಗೊಂಡು ವಿಚಾರಿಸಲು ಪಲ್ಲವಿ ಅವರು 2024ರ ನವೆಂಬರ್ 25ರಂದು ಆರೋಪಿಯ ಮನೆಗೆ ತೆರಳಿದ್ದಾಗ, ಲತೀಶ್ ಪೂಜಾರಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ.
ಈ ಕುರಿತು ಸಂತ್ರಸ್ತೆ ನೀಡಿದ ದೂರಿನನ್ವಯ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ (ಅಪರಾಧ ಕ್ರಮಾಂಕ 34/2026, ಕಲಂ: 66(c), 66(d) ಐಟಿ ಕಾಯ್ದೆ ಹಾಗೂ ಬಿಎನ್‌ಎಸ್ ಕಲಂ 316(2), 318(4), 115(2), 351) ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ








