ಕಲಬುರಗಿ: KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ನಡೆಸಿರುವ ಒಂದೊಂದೇ ಅಕ್ರಮಗಳು ಬಯಲಾಗುತ್ತಿದ್ದು, ಅಳಿಯನ ಜೊತೆ ಸೇರಿ ನಕಲಿ ದಾಖಲೆ ಸೃಷ್ಟಿಸಿ ಕಂಡವರ ಜಮೀನಿಗೆ ಕನ್ನ ಹಾಕಿದ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಅಣಬಿ ಗ್ರಾಮದಲ್ಲಿ ಅಳಿಯ ಶಂಕರಗೌಡ ಮೂಲಕ ಸರ್ವೆ ನಂಬರ್ 242, 245ರಲ್ಲಿರುವ 27 ಎಕರೆ ಭೂಕಬಳಿಕೆ ಬಗ್ಗೆ ದೂರಲಾಗಿದೆ. ಭೂಮಾಲಕಿ ಬಸಮ್ಮ ಪುತ್ರ ಎಂದು ಸುಳ್ಳು ದಾಖಲೆ ಸೃಷ್ಟಿಸಿ ವಂಚನೆ ನಡೆಸಲಾಗಿದೆ. ಮೊದಲಿಗೆ ಅಳಿಯನ ಹೆಸರಿಗೆ ಭೂಮಿ ನೋಂದಣಿ ಮಾಡಿಸಿ ನಂತರ ತನ್ನ ಹೆಸರಿಗೆ ಶಿವಶಂಕರಪ್ಪ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಭೂಮಾಲಕಿ ಬಸಮ್ಮ ಕುಟುಂಬ ಶಹಾಪುರ ಠಾಣೆಗೆ ದೂರು ನೀಡಿದೆ. ಭೂಮಿ ವಂಚನೆ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ಟಿವಿ9 ಶಿವಶಂಕರಪ್ಪ ಅವರನ್ನು ಸಂಪರ್ಕಿಸಲು ಯತ್ನಿಸಿತ್ತಾದರೂ ಅದು ಸಾಧ್ಯವಾಗಿಲ್ಲ. ಹೀಗಾಗಿ ಅವರಿಂದ ಪ್ರಕರಣದ ಬಗ್ಗೆ ಈ ವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ.
ಮತ್ತೊಂದೆಡೆ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣ ಸಂಬಂಧ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ಗೆ ಬಂಧನದ ಭೀತಿ ಎದುರಾಗಿದೆ. ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ಸಿಐಡಿ ಮೂರನೇ ನೋಟಿಸ್ ಸಂಬಂಧ ಶಿವಶಂಕರಪ್ಪ ವಿಚಾರಣೆಗೆ ಗೈರಾಗಿದ್ದು, ನಿನ್ನೆ ಹೈಕೋರ್ಟ್ ಶಿವಶಂಕರಪ್ಪಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಸಾಹುಕಾರ್ ಮನೆ ಮೇಲೆ ದಾಳಿ ಮಾಡಿದ್ದರು. ಆದರೆ ಸಿಐಡಿ ವಿಚಾರಣೆಗೆ ಹಾಜರಾಗದ ಶಿವಶಂಕರಪ್ಪ ಮನೆಯಲ್ಲೂ ಇಲ್ಲದಿರೋದು ಆ ವೇಳೆ ಗೊತ್ತಾಗಿತ್ತು
ನೀಟ್ ಪರೀಕ್ಷೆ ಅಕ್ರಮದಿಂದ ಕೆಲ ವಿದ್ಯಾರ್ಥಿಗಳೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಕೃತ್ಯಗಳಿಂದಾಗಿಯೇ ಇತ್ತೀಚೆಗೆ ಭಾರೀ ಪ್ರತಿಭಟನೆ ನಡೆದಿದೆ. ಹೀಗಾದರೆ ರಾತ್ರಿ ಹಗಲು ಓದಿದವರ ಕಥೆ ಏನಾಗಬೇಕು? ಕೆಪಿಎಸ್ಸಿ ಮೇಲಿನ ಜನರ ವಿಶ್ವಾಸವೇ ನಾಶವಾಗಿದೆ. ನಿಮ್ಮ ಕುಟುಂಬದ ಸದಸ್ಯರೇ ಇದರಲ್ಲಿ ಭಾಗಿಯಾಗಿದ್ದಾರೆ. ಇದು ವ್ಯವಸ್ಥಿತ ಫ್ರಾಡ್ ಎಂದು ಶಿವಶಂಕರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರು, ಜಾಮೀನು ಅರ್ಜಿಯನ್ನು ವಜಾ ಮಾಡಿದ್ದರು.








