ಬಾಗಲಕೋಟೆ: ಪ್ರಿಯಕರ ಕರೆ ಮಾಡುತ್ತಿಲ್ಲ ಎಂಬ ಬೇಸರಕ್ಕೆ ಎರಡು ಮಕ್ಕಳ ತಾಯಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ಬಾಂಬೆ ಕಾಲೋನಿಯಲ್ಲಿ ನಡೆದಿದೆ. ಮೆಹಬೂಬ್ ಬಿ (27) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಮಹಿಳೆ ಯುವಕನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಕೆಲ ದಿನಗಳಿಂದ ಆತ ಕರೆ ಮಾಡುತ್ತಿರಲಿಲ್ಲ. ಅಲ್ಲದೆ, ಮಹಿಳೆ ಕರೆ ಮಾಡಿದರೂ ಆತ ಸ್ವೀಕರಿಸುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದಿದ್ದ ಮಹಿಳೆ ತೀವ್ರವಾಗಿ ನೊಂದು ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ಮಹಿಳೆ ನೇಣು ಬಿಗಿದುಕೊಳ್ಳುತ್ತಿರುವುದನ್ನು ವಿಡಿಯೋ ಮಾಡಿಕೊಂಡು ಪ್ರಿಯಕರನಿಗೆ ಕಳುಹಿಸಿದ್ದಾಳೆ ಎನ್ನಲಾಗಿದೆ. ಅಲ್ಲದೆ, ಕರೆ ಮಾಡದಿದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಡಿಯೋ ಸಂದೇಶದ ಮೂಲಕವೂ ಎಚ್ಚರಿಕೆ ನೀಡಿದ್ದಳು ಎಂದು ತಿಳಿದುಬಂದಿದೆ.
ಘಟನೆ ಬಳಿಕ ಬಾಗಲಕೋಟೆ ನವನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








