ನೆಲಮಂಗಲ: ಮಗಳ ಲಗ್ನಪತ್ರಿಕೆ ಹಂಚಲು ಹೋಗಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರೆ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯಲ್ಲಿ ನಡೆದಿದೆ. ಲಕ್ಷ್ಮೀ ದೇವಿ ಅಲಿಯಾಸ್ ದೇವಮ್ಮ(42) ಮೃತ ಮಹಿಳೆಯಾಗಿದ್ದರೆ, ಅವರ ಪತಿ ಪತಿ ವಿಜಯ್ ಕುಮಾರ್(48) ಅವರ ಕಾಲು ಅಪಘಾತದಲ್ಲಿ ತುಂಡಾಗಿದೆ. ದಂಪತಿ ದೊಡ್ಡಬಳ್ಳಾಪುರ ತಾಲೂಕಿ ಚಿಕ್ಕಮದುರೆ ಹೋಬಳಿಯ ಉದ್ದಿಚಿಕ್ಕನಹಳ್ಳಿ ನಿವಾಸಿಗಳು ಎಂಬುದು ಗೊತ್ತಾಗಿದೆ.
ನ.26, 27ರಂದು ನಿಗದಿಯಾಗಿದ್ದ ಮದುವೆ
ನ.26, 27ರಂದು ಪುತ್ರಿ ಇಂದ್ರಾಣಿ ಮದುವೆ ನಿಶ್ಚಯವಾಗಿದ್ದ ಹಿನ್ನೆಲೆ ಮದುವೆಗೆ ಪತ್ರಿಕೆ ಹಂಚಲು ಹೋಗಿದ್ದ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಲಾರಿ ದಂಪತಿ ತೆರಳುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಪರಿಣಾಮ ದೇವಮ್ಮ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ವಿಜಯ್ ಕುಮಾರ್ ಕಾಲುಗಳ ಮೇಲೂ ಲಾರಿ ಚಲಿಸಿರುವ ಪರಿಣಾಮ ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿಜಯ್ ಕುಮಾರ್ ಸಾಲ ಶೂಲ ಮಾಡಿ ಮಗಳ ಮದುವೆ ಮಾಡಲು ಮುಂದಾಗಿದ್ದರು. ಕಳೆದ ಒಂದು ವಾರದಿಂದ ಮದುವೆಯ ಲಗ್ನ ಪತ್ರಿಕೆಯನ್ನು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಹಂಚುತ್ತಿದ್ದರು ಎನ್ನಲಾಗಿದೆ.








