ಕಲಬುರಗಿ: ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸ್ ಆಯುಕ್ತ ಡಾ. ಶರಣಪ್ಪ ಅವರ ನೇತೃತ್ವದಲ್ಲಿ ಪೊಲೀಸರ ತಂಡ ದಿಢೀರ್ ದಾಳಿನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಜೈಲಿನ ಬ್ಯಾರಕ್ ಸಂಖ್ಯೆ 6ರಲ್ಲಿ ಇದ್ದ ಕೈದಿಯೊಬ್ಬನ ಬಳಿ ಮೊಬೈಲ್ ಫೋನ್ ಪತ್ತೆಯಾಗಿದೆ.
ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ಜೈಲಿನೊಳಗೆ ಕೈದಿಯ ಕೈಗೆ ಮೊಬೈಲ್ ಹೇಗೆ ತಲುಪಿತು ಮತ್ತು ಇದರ ಹಿಂದೆ ಯಾರ್ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರಾಗೃಹಗಳಲ್ಲಿ ಪದೇ ಪದೇ ಇಂತಹ ಘಟನೆಗಳು ಜರುಗುತ್ತಿರುವುದು ಜೈಲು ಆಡಳಿತದ ಭದ್ರತಾ ವ್ಯವಸ್ಥೆಯ ಕುರಿತು ಕಳವಳ ಹಾಗೂ ಅನುಮಾನಗಳನ್ನು ಮೂಡಿಸಿದೆ.








