ಬೆಂಗಳೂರು: ಮನೆ ಮುಂದೆ ಆಟವಾಡುತ್ತಿದ್ದ ಮೂರು ವರ್ಷದ ಮುಗ್ಧ ಕಂದಮ್ಮ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಧಾರುಣ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ತೋಟದಗುಡ್ಡಹಳ್ಳಿಯಲ್ಲಿ ನಡೆದಿದೆ. ಮಲತಾಯಿಯೇ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆಯ ಹಿನ್ನೆಲೆ: 20 ದಿನದ ಹಿಂದಷ್ಟೇ ಬಂದಿದ್ದ ‘ದಂಪತಿ’
ಮೂಲತಃ ನೆಲಮಂಗಲ ತಾಲ್ಲೂಕಿನ ಗುರುವನಹಳ್ಳಿ ಮತ್ತು ವಸಂತನಗರ ನಿವಾಸಿಗಳಾದ ಜಗದೀಶ್ ಹಾಗೂ ಗಿರಿಜಾ, ಕಳೆದ 20 ದಿನಗಳ ಹಿಂದಷ್ಟೇ ತೋಟದಗುಡ್ಡಹಳ್ಳಿಯಲ್ಲಿ ಗಂಡ-ಹೆಂಡತಿ ಎಂದು ಹೇಳಿಕೊಂಡು ಬಾಡಿಗೆ ಮನೆ ಪಡೆದುಕೊಂಡಿದ್ದರು. ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಅವರ ಮೊದಲ ಪತ್ನಿ ಈ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ಗಿರಿಜಾ, ಜಗದೀಶ್ ಜೊತೆ ಬಂದಿದ್ದು, ಮೊದಲ ಪತ್ನಿಯ ಮೂರು ವರ್ಷದ ಮಗಳು ಲಿಕ್ಷಿತಾ ಕೂಡ ಇವರೊಂದಿಗೇ ವಾಸವಿದ್ದಳು.
ಆಟವಾಡುತ್ತಿದ್ದ ಕಂದಮ್ಮನ ನಿಗೂಢ ಸಾವು
ಗುರುವಾರ ಮನೆ ಮುಂದೆ ಎಂದಿನಂತೆ ಆಟವಾಡುತ್ತಿದ್ದ ಮಗು ಲಿಕ್ಷಿತಾ ದಿಢೀರನೆ ಮೃತಪಟ್ಟಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಮೂಡಿವೆ. ಮಗುವಿನ ದೇಹವನ್ನು ಪರಿಶೀಲಿಸಿದಾಗ ಮೈಮೇಲೆ ಬರೆ ಎಳೆದಿರುವ ಹಾಗೂ ಹಲ್ಲೆ ನಡೆಸಿರುವ ಗಾಯದ ಗುರುತುಗಳು ಪತ್ತೆಯಾಗಿವೆ. ಮಲತಾಯಿ ಗಿರಿಜಾ ಹಿಂದಿನಿಂದಲೂ ಮಗುವಿಗೆ ನಿರಂತರವಾಗಿ ದೈಹಿಕ ಕಿರುಕುಳ ಹಾಗೂ ಚಿತ್ರಹಿಂಸೆ ನೀಡುತ್ತಿದ್ದಳು ಎಂಬ ಶಂಕೆ ವ್ಯಕ್ತವಾಗಿದೆ.
ಸ್ಥಳದಲ್ಲೇ ಮಲತಾಯಿಗೆ ಸಾರ್ವಜನಿಕರ, ಕುಟುಂಬಸ್ಥರ ಥಳಿತ
ಮಲತಾಯಿ ಗಿರಿಜಾಳೇ ಹಲ್ಲೆ ನಡೆಸಿ ಹಸುಗೂಸನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿರುವ ಮೃತ ಲಿಕ್ಷಿತಾಳ ಕುಟುಂಬಸ್ಥರು, ರೊಚ್ಚಿಗೆದ್ದು ಸ್ಥಳದಲ್ಲೇ ಗಿರಿಜಾಗೆ ಹಿಗ್ಗಾಮುಗ್ಗಾ ಥಳಿಸಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪೊಲೀಸರ ಭೇಟಿ, ತನಿಖೆ ಚುರುಕು
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.








