ಪ್ರಸಿದ್ಧ ಪಾಪ್ ಸಂಗೀತಗಾರ ಹಾಗೂ ಗಿಟಾರ್ ವಾದಕ ಚಾಂಗ್ಥಮ್ ವಿಕ್ರಮ್ ಸಿಂಗ್ ಅವರನ್ನು ಗುಂಪೊಂದು ಭೀಕರವಾಗಿ ಹೊಡೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಪ್ರಕರಣ ಸಂಬಂಧ ಕೃತ್ಯ ಎಸಗಿದ್ದ 15 ವರ್ಷದ ಬಾಲಕ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ 17 ವರ್ಷಗಳಿಂದ ದೆಹಲಿಯಲ್ಲಿ ಖಾಸಗಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಚಾಂಗ್ಥಮ್ ವಿಕ್ರಮ್ ಸಿಂಗ್, ಪತ್ನಿ ಮತ್ತು ಮಗನೊಂದಿಗೆ ಕಿಲೋಕರಿಯಲ್ಲಿ ವಾಸಿಸುತ್ತಿದ್ದರು. ಭಾನುವಾರ ರಾತ್ರಿ 11:30 ರ ಸುಮಾರಿಗೆ ವಿಕ್ರಮ್ ಸಿಂಗ್ ಕಸ ಎಸೆಯಲು ಕೆಳಗೆ ಹೋದಾಗ, ಕಟ್ಟಡದ ಮುಂಭಾಗದಲ್ಲಿದ್ದ ಗುಂಪೊಂದು ಗಲಾಟೆ ಮಾಡುತ್ತಿತ್ತು. ಇದನ್ನು ವಿಕ್ರಮ್ ಸಿಂಗ್ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು, ಗ್ಯಾಂಗ್ ಅವರ ಮೇಲೆಯೇ ಎರಗಿದೆ. ಪ್ರಾಣ ಉಳಿಸಿಕೊಳ್ಳಲು ವಿಕ್ರಮ್ ತಮ್ಮ ಮೂರನೇ ಮಹಡಿಯ ಮನೆಗೆ ಓಡಿದರೂ, ಬೆನ್ನಟ್ಟಿದ ಆರೋಪಿಗಳು ಕಾರಿಡಾರ್‌ನಲ್ಲೇ ಅವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಓಖ್ಲಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಸೋಮವಾರ ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಆರೋಪಿಗಳು ಪಿಜ್ಜಾ ಡೆಲಿವರಿ ಬಾಯ್ಸ್!
ಪ್ರಕರಣದ ಬೆನ್ನುಬಿದ್ದ ಸನ್‌ಲೈಟ್ ಕಾಲೋನಿ ಠಾಣೆ ಪೊಲೀಸರು, ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಭರತ್ ಕುಮಾರ್ (19), ಪ್ರಮೋದ್ (26), ರಂಜಾನ್ ಖಾನ್ (22), ವಿಜಯ್ (36), ದೀಪಾಂಶು (21), ಮೋಹನ್ ವಿಶ್ವಕರ್ಮ (32), ಮನ್ನು (26) ಮತ್ತು 15 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತರು ಧಾಬಾ, ಪಿಜ್ಜಾ ಮಳಿಗೆಗಳಲ್ಲಿ ಡೆಲಿವರಿ ಹಾಗೂ ಪ್ಯಾಕಿಂಗ್ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಎಂದು ತಿಳಿದುಬಂದಿದೆ.
ಸಿಟಿವಿ ದೃಶ್ಯ ವೈರಲ್: ತೀವ್ರ ತನಿಖೆಗೆ ಮಣಿಪುರ ಸಿಎಂ ಆಗ್ರಹ
ಕೊಲೆಯ ನಂತರ ಆರೋಪಿಗಳು ಮೆಟ್ಟಿಲು ಇಳಿದು ಓಡಿಹೋಗುತ್ತಿರುವ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತಮ್ಮ ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಮಣಿಪುರದ ಕಲೆ ಮತ್ತು ಸಂಸ್ಕೃತಿಗೆ ಅಪಾರ ಕೊಡುಗೆ ನೀಡಿದ್ದ ಮಹಾನ್ ಕಲಾವಿದನ ದಾರುಣ ಸಾವು ತೀವ್ರ ದುಃಖ ತಂದಿದೆ. ದೆಹಲಿ ಪೊಲೀಸರು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ ಸಂತ್ರಸ್ತ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ. ಪ್ರಸ್ತುತ ಮಣಿಪುರ ಮುಖ್ಯಮಂತ್ರಿ ಖೇಮ್‌ಚಂದ್ ಯುಮ್ನಮ್ ಕೂಡ ಶೋಕ ವ್ಯಕ್ತಪಡಿಸಿದ್ದಾರೆ.








