ಬೆಂಗಳೂರು: ‘ಕಕ್ಷಿದಾರರ ಹಿತ ರಕ್ಷಣೆಯೂ ಕೋರ್ಟಿನ ಹೊಣೆ’ ಎಂಬ ಕಾಳಜಿ ವ್ಯಕ್ತಪಡಿಸಿರುವ ಹೈಕೋರ್ಟ್, ‘ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಯಾವುದೇ ಕಿರುಕುಳ ಇಲ್ಲದೆ ಸೌಹಾದರ್ತಯುತವಾಗಿ ಮತ್ತು ವಿಳಂಬಗೊಳ್ಳದೆ ಮುಗಿಯಬೇಕು. ತಾಂತ್ರಿಕ ಕಾರಣಗಳಿಂದ ಸಾಕ್ಷಿಗಳ ವಿಚಾರಣೆ ತಡವಾಗಬಾರದು’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ಸಾಕ್ಷಿಗಳ ವಿಚಾರಣೆ ವೇಳೆ ಖುದ್ದು ಹಾಜರಾಗಲು ಪ್ರಕರಣದ ಆರೋಪಿ ದರ್ಶನ್‌ಗೆ ಅನುಮತಿ ನೀಡಲು ನಿರಾಕರಿಸಿದ್ದ ಸೆಷನ್ಸ್ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ದರ್ಶನ್ ಪರ ಅವರ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿಜಯಲಕ್ಷ್ಮಿ ಪರ ಪದಾಂಕಿತ ಹಿರಿಯ ವಕೀಲ ಹಷ್ಮತ್ ಪಾಷ ಮತ್ತು ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘ಸಾಕ್ಷಿ ವಿಚಾರಣೆ ವಿಳಂಬವಾದಷ್ಟೂ ಪ್ರಾಸಿಕ್ಯೂಷನ್‌ಗೆ ಅಪಾಯ’ ಎಂದು ಎಚ್ಚರಿಸಿತು.
‘ಪ್ರಕರಣದಲ್ಲಿ ನಾಲ್ಕೈದು ಮುಖ್ಯ ಸಾಕ್ಷಿಗಳು ಮಾತ್ರವೇ ಇದ್ದಾರೆ. ಅವರ ಪಾಟಿ ಸವಾಲಿಗೆ ಮೂರು ದಿನ ಸಾಕಾಗುತ್ತದೆ. ನಿಮಗೆ ಯಾವ ದಿನ ಬೇಕು ಎಂದು ಅರ್ಜಿದಾರರು ಹಾಗೂ ತನಿಖಾಧಿಕಾರಿ ವಿಚಾರಣಾ ಕೋರ್ಟ್ ಗಮನಕ್ಕೆ ತಂದು ತೀರ್ಮಾನಿಸಿಕೊಳ್ಳಬಹುದು. ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಬೇಕಾದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ನಡೆಸಲು ಸೂಚನೆ ನೀಡುತ್ತೇನೆ’ ಎಂದು ತಿಳಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಿದರು.








