ಮುಂಬೈ: ಬಾಲಿವುಡ್ ನಟಿ ಅಮೀಷಾ ಪಟೇಲ್ ಅವರ ತಾಯಿಯ ಮನೆಯಲ್ಲಿ ಸುಮಾರು 5 ಲಕ್ಷ ರೂ. ಮೌಲ್ಯದ ವಜ್ರದ ಬಳೆಗಳನ್ನು ಕಳವು ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮನೆಗೆಲಸದ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸೀಮಾ ಘಾಟೆ(40) ಎಂದು ಗುರುತಿಸಲಾಗಿದೆ. ಆರೋಪಿಯು ಅಮೀಷಾ ಪಟೇಲ್ ಅವರ ತಾಯಿ ಆಶಾ ಪಟೇಲ್ ಅವರ ಮನೆಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಆಶಾ ಪಟೇಲ್ ನೀಡಿದ ದೂರಿನ ಮೇರೆಗೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಮಹಿಳೆಯನ್ನು ವಿರಾರ್‌ನಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಯನ್ನು ಸೆಪ್ಟೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು.
2026ರ ಜನವರಿಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಮಾಡಲಾಗಿದೆ. ಆಶಾ ಪಟೇಲ್ ಅವರಿಗೆ ಘಾಟೆ ಅವರ ಮೇಲೆ ಅನುಮಾನವಿತ್ತು. ಹೀಗಾಗಿ ಕಳೆದ ಆರೇಳು ತಿಂಗಳಿಂದ ಕಳ್ಳತನವನ್ನು ಒಪ್ಪಿಕೊಂಡು ಆಭರಣವನ್ನು ಹಿಂತಿರುಗಿಸುವಂತೆ ಕೇಳುತ್ತಿದ್ದರು ಎಂದು ಹೇಳಲಾಗಿದೆ.








