ರಾಷ್ಟ್ರೀಯ ಉಪಾಧ್ಯಕ್ಷರ ಶಿಫಾರಸ್ಸಿನ ಮೇರೆಗೆ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಹರಿಶಂಕರ್ ಶುಕ್ಲಾ ಅವರು ಸೆಪ್ಟೆಂಬರ್ 15ರಂದು ನೇಮಕಾತಿ ಆದೇಶ ಹೊರಡಿಸಿದ್ದು, ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ಕರ್ನಾಟಕ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ. ಅವರ ಅಧಿಕಾರಾವಧಿ ಸೆಪ್ಟೆಂಬರ್ 15, 2026ರಿಂದ ಸೆಪ್ಟೆಂಬರ್ 30, 2028ರವರೆಗೆ ಇರಲಿದೆ. ಆದರೆ ಈ ನೇಮಕಾತಿ ಸಂಘಟನೆಯ ಕೇಂದ್ರ ಕಾರ್ಯಕಾರಿ ಸಮಿತಿಯ ಅನುಮೋದನೆ ಹಾಗೂ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯೋಗಿಶ್ ಶೆಟ್ಟಿ ಜಪ್ಪು ಅವರು ಈ ಹಿಂದೆ ಮಂಗಳೂರು ನಗರ ಪಾಲಿಕೆ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಯುವ ಸಾಧಕ ಪ್ರಶಸ್ತಿ, ಜ್ಞಾನ ಸರಸ್ವತಿ ರಾಜ್ಯ ಪ್ರಶಸ್ತಿ ಹಾಗೂ ಸಂಘ ರತ್ನ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ವರದಿ ತಿಳಿಸಿದೆ.
ಕರ್ನಾಟಕದಲ್ಲಿ ಗ್ರಾಹಕರ ಹಕ್ಕುಗಳು, ಗ್ರಾಹಕರ ಜಾಗೃತಿ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಜವಾಬ್ದಾರಿ ಯೋಗಿಶ್ ಶೆಟ್ಟಿ ಜಪ್ಪು ಅವರ ಮೇಲಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಘಟನೆಯ ಘಟಕಗಳನ್ನು ಸಕ್ರಿಯಗೊಳಿಸುವುದು, ಗ್ರಾಹಕರಿಗೆ ತಮ್ಮ ಹಕ್ಕುಗಳ ಕುರಿತು ಅರಿವು ಮೂಡಿಸುವುದು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಅವರು ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.
ಗ್ರಾಹಕರಿಗೆ ಸುರಕ್ಷಿತ ಮತ್ತು ಗುಣಮಟ್ಟದ ಉತ್ಪನ್ನಗಳು ಹಾಗೂ ಸೇವೆಗಳು ದೊರೆಯುವಂತೆ ಜಾಗೃತಿ ಮೂಡಿಸುವುದು, ಗ್ರಾಹಕರ ಹಕ್ಕುಗಳ ಕುರಿತು ಅರಿವು ಹೆಚ್ಚಿಸುವುದು ಮತ್ತು ಗ್ರಾಹಕರ ಸಮಸ್ಯೆಗಳಿಗೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಸ್ಪಂದಿಸುವುದು ಸಂಘಟನೆಯ ಪ್ರಮುಖ ಉದ್ದೇಶಗಳಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಯೋಗಿಶ್ ಶೆಟ್ಟಿ ಜಪ್ಪು ಅವರ ನೇಮಕಾತಿಗೆ ಕರ್ನಾಟಕದ ವಿವಿಧ ಸಾಮಾಜಿಕ, ಸಂಘಟನಾ ಹಾಗೂ ಗ್ರಾಹಕಪರ ವಲಯಗಳಿಂದ ಅಭಿನಂದನೆಗಳುವ್ಯಕ್ತವಾಗಿವೆ. ಈ ಸಂದರ್ಭದಲ್ಲಿ ಮಾತನಾಡಿರುವ ನೂತನ ರಾಜ್ಯಾಧ್ಯಕ್ಷರು, ಗ್ರಾಹಕರ ಹಕ್ಕುಗಳ ರಕ್ಷಣೆ ಹಾಗೂ ಜನರಲ್ಲಿ ಗ್ರಾಹಕ ಜಾಗೃತಿ ಮೂಡಿಸುವುದಕ್ಕೆ ಆದ್ಯತೆ ನೀಡಲಾಗುವುದು ಮತ್ತು ಕರ್ನಾಟಕದಾದ್ಯಂತ ಸಂಘಟನೆಯನ್ನು ಬಲಪಡಿಸುವುದಾಗಿ ತಿಳಿಸಿದ್ದಾರೆ








