ಬೆಂಗಳೂರು: ಕರಾವಳಿ ಭಾಗದ ಜನರ ಬಹುಕಾಲದ ಆಶೋತ್ತರಗಳನ್ನು ಈಡೇರಿಸುವ ಹಾಗೂ ಪ್ರಾದೇಶಿಕ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 18ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಲನಗರಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ವಿಚಾರವಾಗಿ ಇದೀಗ ಡಿಕೆ ಶಿವಕುಮಾರ್ ಎಕ್ಸ್ ತಾಣದ ಮೂಲಕ ವಿಡಿಯೋ ಸಂದೇಶ ಹರಿಬಿಟ್ಟು, ಮಾಹಿತಿ ನೀಡಿದ್ದಾರೆ. ಕರಾವಳಿ ಭಾಗದ ಜನರ ಬಹುಕಾಲದ ಆಶೋತ್ತರಗಳನ್ನು ಈಡೇರಿಸಲು, ಇದೇ ಸೆಪ್ಟೆಂಬರ್ 18ರಂದು ಕಡಲನಗರಿ ಮಂಗಳೂರಿನಲ್ಲಿ ನಮ್ಮ ಸರ್ಕಾರದ ವಿಶೇಷ ಸಚಿವ ಸಂಪುಟ ಸಭೆ ಆಯೋಜಿಸಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಕರಾವಳಿಯ ಜನರ ಕಷ್ಟ-ಸುಖಗಳನ್ನು ಹತ್ತಿರದಿಂದ ಕಂಡು, ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಸ್ಥಳದಲ್ಲೇ ನಿರ್ಧಾರ ಕೈಗೊಳ್ಳುವುದು ನಮ್ಮ ಉದ್ದೇಶ. ಬಂದರು, ಮೂಲಸೌಕರ್ಯ, ಮೀನುಗಾರಿಕೆ ಮತ್ತು ಕೈಗಾರಿಕಾ ರಂಗಗಳಿಗೆ ನವಚೈತನ್ಯ ತುಂಬುವ ಮೂಲಕ ಕರಾವಳಿಯ ಸಮೃದ್ಧಿಗೆ ಹೊಸ ಮುನ್ನುಡಿ ಬರೆಯಲು ‘ಟೀಮ್ ಕರ್ನಾಟಕ’ ಸಜ್ಜಾಗಿದೆ ಎಂದು ಡಿಕೆಶಿ ವಿಡಿಯೋ ಸಂದೇಶದ ಜತೆ ಬರೆದುಕೊಂಡಿದ್ದಾರೆ. ವಿಡಿಯೋ ಸಂದೇಶದ ಕೊನೆಯಲ್ಲಿ ‘ಮಾತೆರೆಗ್‌ಲ ಸೊಲ್ಮೆಲು (ಎಲ್ಲರಿಗೂ ವಂದನೆಗಳು)’ ಎಂದು ತುಳು ಭಾಷೆಯಲ್ಲೇ ಸಿಎಂ ಹೇಳಿದ್ದಾರೆ.








