ಉಡುಪಿ: ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರ ಕೊಲೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಜೊತೆಗೆ ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಉಡುಪಿ ಮೂಲದ ಪ್ರಕಾಶ್ ಕುಂದರ್ ಮೃತ ವ್ಯಕ್ತಿ. ಅವರು ಶಾರ್ಜಾದಲ್ಲಿ ಪತ್ನಿ ಮತ್ತು ಮಗನೊಂದಿಗೆ ವಾಸಿಸುತ್ತಿದ್ದರು. ಈ ಕೊಲೆಯ ಬಳಿಕ ಪ್ರಕಾಶ್ ಅವರ ಪತ್ನಿ ಟೀನಾ ಮತ್ತು ಅವರ ಅಪ್ರಾಪ್ತ ಮಗ ನಾಪತ್ತೆಯಾಗಿದ್ದು, ಅವರ ಇರುವಿಕೆಯ ಬಗ್ಗೆ ಅನುಮಾನ ಮೂಡಿದೆ.
ವರದಿಗಳ ಪ್ರಕಾರ, ಜುಲೈ 20 ರ ಸುಮಾರಿಗೆ ಪ್ರಕಾಶ್ ತಮ್ಮ ಸಹೋದರನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಸಾಮಾನ್ಯವಾಗಿ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದ ಪ್ರಕಾಶ್, ಈ ಬಾರಿ ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದರು. ಸಹೋದರರು ದೂರವಾಣಿ ಕರೆ ಮಾಡುವಂತೆ ಒತ್ತಾಯಿಸಿದಾಗ, ಸಂಭಾಷಣೆ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.
ಆತಂಕಗೊಂಡ ಸಂಬಂಧಿಕರು ನಂತರ ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಪ್ರಕಾಶ್ ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿಯು ತಿಳಿಸಿದೆ. ಆದರೆ ಅವರು ತಮ್ಮ ಸ್ವಗ್ರಾಮಕ್ಕೆ ಬಾರದಿಗಿದಾಗ ಕುಟುಂಬಸ್ಥರಿಗೆ ಅನುಮಾನಗೊಂಡು ಶಾರ್ಜಾದಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ ಪ್ರಕಾಶ್‌ಗಾಗಿ ಶಾರ್ಜಾ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದರು. ತನಿಖೆಯ ವೇಳೆ ಅವರದೇ ಕಾರಿನ ಒಳಗೆ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದೆ. ಅವರನ್ನು ಕೊಲೆ ಮಾಡಲಾಗಿದ್ದು, ದೇಹವನ್ನು ಹಲವು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಪತ್ನಿ ಟೀನಾ ಮತ್ತು ಅವರ ಮಗ ಪ್ರಸ್ತುತ ಪತ್ತೆಯಾಗದ ಕಾರಣ ಪ್ರಕಾಶ್ ಪತ್ನಿಯ ಮೇಲೆ ಸಂಶಯ ವ್ಯಕ್ತವಾಗಿದೆ. ಅವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಅಥವಾ ಬೇರೆ ಸಂದರ್ಭಗಳಲ್ಲಿ ಶಾರ್ಜಾದಿಂದ ತೆರಳಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಶಾರ್ಜಾದಿಂದ ತೆರಳಿದ ಬಳಿಕ ಅವರು ಭಾರತಕ್ಕೆ ತೆರಳಿರಬಹುದು ಎಂದು ಹೇಳಲಾಗುತ್ತಿದೆ. ಶಾರ್ಜಾದಲ್ಲಿ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಪ್ರಕಾಶ್ ಅವರ ಮೃತದೇಹವನ್ನು ತಾಯ್ನಾಡಿಗೆ ತರಲು ಕುಟುಂಬದವರು ಕಾಯುತ್ತಿದ್ದಾರೆ.
ಪ್ರಕಾಶ್ ಅವರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಪತ್ನಿ ಟೀನಾ ಶಿಕ್ಷಕಿಯಾಗಿ ಉದ್ಯೋಗದಲ್ಲಿದ್ದರು. ದಂಪತಿಗೆ ಮದುವೆಯಾಗಿ ಸುಮಾರು 20 ವರ್ಷಗಳಾಗಿದ್ದು, 10ನೇ ತರಗತಿಯಲ್ಲಿ ಓದುತ್ತಿರುವ ಮಗನಿದ್ದಾನೆ.
ದಂಪತಿಗಳ ನಡುವೆ ಯಾವುದೇ ಗಂಭೀರ ವಿವಾದಗಳಿದ್ದ ಬಗ್ಗೆ ತಮಗೆ ತಿಳಿದಿರಲಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಪ್ರಕಾಶ್ ಕಳೆದ ವರ್ಷ ಡಿಸೆಂಬರ್‌ನಲ್ಲಿ ಭಾರತಕ್ಕೆ ಬಂದು ಹೋಗಿದ್ದರು.
ತನಿಖೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಹಾಗೂ ಪ್ರಕಾಶ್ ಅವರ ಪತ್ನಿ ಮತ್ತು ಮಗನ ಇರುವಿಕೆಯ ಕುರಿತು ಮಾಹಿತಿ ಲಭ್ಯವಾಗಬೇಕಿದೆ.








