ಮಲ್ಪೆ : ಮೊಬೈಲ್ ಫೋನ್ಗೆ ನಿಗೂಢ ಸಂದೇಶ (ಪಾಪ್–ಅಪ್) ಕಳುಹಿಸಿ, ಫೋನ್ ಹ್ಯಾಕ್ ಮಾಡುವ ಮೂಲಕ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು ₹3.03 ಲಕ್ಷ ಹಣವನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಕೊಡವೂರಿನಲ್ಲಿ ನಡೆದಿದೆ. ವಂಚನೆಗೆ ಒಳಗಾದ ಕೊಡವೂರು ನಿವಾಸಿ ಪ್ರಸನ್ನ ಅವರು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನವೆಂಬರ್ 9ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪ್ರಸನ್ನ ಅವರು ಮನೆಯಲ್ಲಿರುವಾಗ, ಅವರ ಮೊಬೈಲ್ ಪರದೆಯ ಮೇಲೆ ‘PLAY LOOM’ ಎಂದು ನಿರಂತರವಾಗಿ ಸಂದೇಶ ಬರಲಾರಂಭಿಸಿತ್ತು. ಅದನ್ನು ತೆಗೆಯಲು ಪ್ರಯತ್ನಿಸಿದರೂ ಸಂದೇಶ ಹೋಗಿರಲಿಲ್ಲ. ಜೊತೆಗೆ ಪರದೆಯ ಮೇಲೆ ‘ಅಪ್ಡೇಟ್’ ಎಂದು ತೋರಿಸುತ್ತಿತ್ತು. ಇದರಿಂದ ಗಾಬರಿಗೊಂಡ ಪ್ರಸನ್ನ ಅವರು, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿ ಜಿಯೋ ಹಾಗೂ ಬಿಎಸ್ಎನ್ಎಲ್ ಸಿಮ್ ಕಾರ್ಡ್ಗಳನ್ನು ಹೊರತೆಗೆದು, ಬಳಿಕ ಮತ್ತೆ ಫೋನ್ ಆನ್ ಮಾಡಿದ್ದರು. ಮರುದಿನ ಬೆಳಿಗ್ಗೆ ಮೊಬೈಲ್ ಆನ್ ಮಾಡಿದಾಗಲೂ ಮತ್ತೆ ಅಪ್ಡೇಟ್ ಕೇಳುತ್ತಿತ್ತು.
ಈ ನಡುವೆ ಪ್ರಸನ್ನ ಅವರು ಮೊಬೈಲ್ ರೀಚಾರ್ಜ್ ಮಾಡಲು ಮುಂದಾದಾಗ, ಬ್ಯಾಂಕ್ ಖಾತೆಗಳಲ್ಲಿ ಹಣವಿಲ್ಲ ಎಂಬ ಸಂದೇಶ ಬಂದಿದೆ. ಅನುಮಾನಗೊಂಡು ಪರಿಶೀಲಿಸಿದಾಗ, ಕೆಳಾರ್ಕಳಬೆಟ್ಟು ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹1,85,000 ಹಾಗೂ ಆದಿ ಉಡುಪಿ ಶಾಖೆಯ ಕೆನರಾ ಬ್ಯಾಂಕ್ ಖಾತೆಯಿಂದ ₹1,18,000 ಸೇರಿ ಒಟ್ಟು ₹3,03,000 ಹಣ ಅಕ್ರಮವಾಗಿ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣವೇ ಎಚ್ಚೆತ್ತ ಪ್ರಸನ್ನ ಅವರು ಸೈಬರ್ ಸಹಾಯವಾಣಿ ಸಂಖ್ಯೆ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿ, ತಮ್ಮ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ (ಫ್ರೀಜ್). ದೂರಿನ ಮೇರೆಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.








