ಮುಂಬೈ: ಸಿನಿಮಾ ಯೋಜನೆಗಳ ಹೆಸರಿನಲ್ಲಿ ವಿದೇಶಕ್ಕೆ ಅಕ್ರಮವಾಗಿ ಹಣ ರವಾನಿಸಲಾಗಿದೆ ಎಂಬ ಆರೋಪದ ಮೇಲೆ ನಟಿ ರಕುಲ್ ಪ್ರೀತ್ ಸಿಂಗ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಿನಿಮಾ ನಿರ್ಮಾಣ ಹಾಗೂ ಯೋಜನೆಗಳ ಹೆಸರಿನಲ್ಲಿ ವಿದೇಶಗಳಿಗೆ ಅನುಮಾನಾಸ್ಪದವಾಗಿ ಹಣ ರವಾನೆ ಮಾಡಲಾಗ್ತಿದೆ. ಸಿನಿಮಾಗಳ ಬಜೆಟ್ ಹಾಗೂ ವೆಚ್ಚಗಳನ್ನ ಮುಂದಿಟ್ಟುಕೊಂಡು, ತೆರಿಗೆ ವಂಚಿಸುವ ಉದ್ದೇಶದಿಂದ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ಲಭಿಸಿದೆ. ಹೀಗಾಗಿ ಹಣದ ಮೂಲ, ಹೂಡಿಕೆ ಹಾಗೂ ವಿದೇಶಿ ವಹಿವಾಟುಗಳ ಸತ್ಯಾಸತ್ಯತೆಯನ್ನ ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ ಚಲನಚಿತ್ರೋದ್ಯಮದ ಹಲವು ಗಣ್ಯರು ಮತ್ತು ಅವರ ಕಂಪನಿಗಳಿಗೆ ಸಂಬAಧಿಸಿದ ಸುಮಾರು 12 ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ.
ಆದಾಯ ತೆರಿಗೆ ಇಲಾಖೆಯ ತನಿಖಾಧಿಕಾರಿಗಳಿಗೆ ಲಭಿಸಿರುವ ಮಾಹಿತಿಯ ಹಿನ್ನೆಲೆ, ನಟಿ ರಾಕುಲ್ ಪ್ರೀತ್ ಸಿಂಗ್, ಅವರ ಮಾವ ಹಾಗೂ ಹಿರಿಯ ಸಿನಿಮಾ ನಿರ್ಮಾಪಕ ವಾಸು ಭಗ್ನಾನಿ ಮತ್ತು ಪನೋರಮಾ ಸ್ಟುಡಿಯೋಗಳಿಗೆ ಸೇರಿದ ಸುಮಾರು 12 ಪ್ರಮುಖ ಸ್ಥಳಗಳಲ್ಲಿ ಶೋಧ ನಡೆಸುತ್ತಿದ್ದಾರೆ. ಪ್ರಸ್ತುತ ದಾಳಿ ಹಾಗೂ ಶೋಧ ಕಾರ್ಯ ಮುಂದುವರಿದಿದ್ದು, ಇಲಾಖೆಯ ಅಧಿಕಾರಿಗಳು ಹಣಕಾಸಿನ ವಹಿವಾಟುಗಳ ಸಂಪೂರ್ಣ ವಿವರಗಳನ್ನ ಸಂಗ್ರಗಿಸುತ್ತಿದ್ದಾರೆ. ಮುಟ್ಟುಗೋಲು ಹಾಕಿಕೊಳ್ಳಲಾದ ದಾಖಲೆಗಳ ಆಧಾರದ ಮೇಲೆ ಸಂಬಂಧಪಟ್ಟ ನಟ-ನಟಿಯರು ಹಾಗೂ ನಿರ್ಮಾಪಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ.








