ಟೆಲ್ ಅವಿವ್: ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ದುಬೈನಿಂದ ಇಸ್ರೇಲ್ಗೆ ಹೊರಟಿದ್ದ ಫ್ಲೈ ದುಬೈ ವಾಣಿಜ್ಯ ವಿಮಾನ ಬುಧವಾರ ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ನಡೆಸಿದೆ. ಕಾಕ್ಪಿಟ್ನಲ್ಲಿ ಪೈಲಟ್ಗಳ ನಡುವೆ ನಡೆದ ಜಗಳದಿಂದಾಗಿ ‘ಹೈಜಾಕ್’ ಎಚ್ಚರಿಕೆ ರವಾನೆಯಾಗಿದ್ದು, ಇಸ್ರೇಲಿ ಯುದ್ಧವಿಮಾನಗಳನ್ನು ಆಗಸಕ್ಕೇರಿಸುವಂತೆ ಮಾಡಿದ್ದಲ್ಲದೆ ಭಾರೀ ಆತಂಕ ಸೃಷ್ಟಿಸಿತ್ತು.
ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳನ್ನು ಉಲ್ಲೇಖಿಸಿ ಇಸ್ರೇಲ್ ಮಾಧ್ಯಮಗಳು ವರದಿ ಮಾಡಿವೆ.
ವಿಮಾನವು ದುಬೈನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ಕಾಕ್ಪಿಟ್ನಲ್ಲಿ ಇಬ್ಬರು ಪೈಲಟ್ಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿದೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ಹೋದಾಗ, ಓರ್ವ ಪೈಲಟ್ ವಿಮಾನ ಹಾರಾಟದ ಸಂದರ್ಭದಲ್ಲೇ ‘7500’ ಎಮರ್ಜೆನ್ಸಿ ಕೋಡ್ ಬಟನ್ ಒತ್ತಿದ್ದಾರೆ. ಅಂತರರಾಷ್ಟ್ರೀಯ ವಿಮಾನಯಾನ ನಿಯಮಾವಳಿಗಳ ಪ್ರಕಾರ, ‘7500’ ಎಮರ್ಜೆನ್ಸಿ ಕೋಡ್ ಎಂಬುದು ವಿಮಾನ ಹೈಜಾಕ್ ಆಗಿದೆ ಎಂಬುದನ್ನು ಸೂಚಿಸುವ ಸಂಕೇತವಾಗಿದೆ. ಈ ಎಚ್ಚರಿಕೆ ರವಾನೆಯಾಗುತ್ತಿದ್ದಂತೆ ಇಸ್ರೇಲಿ ಸೇನೆ ಹಾಗೂ ಭದ್ರತಾ ಸಂಸ್ಥೆಗಳು ತಕ್ಷಣವೇ ಜಾಗೃತಗೊಂಡು, ಇಸ್ರೇಲಿ ಯುದ್ಧ ವಿಮಾನಗಳನ್ನು ಮುನ್ನೆಚ್ಚರಿಕೆಯಾಗಿ ನಿಯೋಜಿಸಿದವು.
ಬಳಿಕ ವಿಮಾನವನ್ನು ಸೌದಿ ಅರೇಬಿಯಾದ ವಾಯುಪ್ರದೇಶಕ್ಕೆ ಮಾರ್ಗಬದಲಾವಣೆ ಮಾಡಲಾಗಿದ್ದು, ಸೌದಿ ರಾಜ್ಯದ ನಾಗರಿಕ ಮತ್ತು ಮಿಲಿಟರಿ ನೆಲೆಯಾಗಿರುವ ‘ತಬುಕ್’ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು. ಪೈಲಟ್ಗಳ ಜಗಳಕ್ಕೆ ನಿಜವಾದ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ವಿಮಾನವು ನಿಗದಿತ ಮಾರ್ಗದಿಂದ ಬೇರೆಡೆಗೆ ತಿರುಗುತ್ತಿದ್ದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಹಿರಿಯ ಭದ್ರತಾ ಅಧಿಕಾರಿಗಳೊಂದಿಗೆ ತುರ್ತು ಸಮಾಲೋಚನೆ ನಡೆಸಿದರು.
ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಸೌದಿಯಲ್ಲಿ ಸುರಕ್ಷಿತವಾಗಿರುವ ಎಲ್ಲಾ 180 ಪ್ರಯಾಣಿಕರನ್ನು ಇಸ್ರೇಲ್ಗೆ ವಾಪಸ್ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.








