ಮಂಗಳೂರು: ಅತ್ತಾವರ ಕಾಪ್ರಿಗುಡ್ಡೆಯ ನಿವಾಸಿ ಹನೀಫ್ ವಲಿ ಮಹಮ್ಮದ್ ಮಸೀದಿಗೆ ತೆರಳುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 66 ದಾಟುತ್ತಿದ್ದ 68 ವರ್ಷದ ವ್ಯಕ್ತಿಯೊಬ್ಬರಿಗೆ ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ. ಘಟನೆ ಮಂಗಳವಾರ ರಾತ್ರಿ ಕುಂಪಲ ಬೈಪಾಸ್ ಬಳಿ ನಡೆದಿದೆ.
ಮಂಗಳವಾರ ಸಂಜೆ ಸುಮಾರು 7 ಗಂಟೆ ವೇಳೆಗೆ ಕುಂಪಲ ಬೈಪಾಸ್‌ನ ಡಿ-ಮಾರ್ಟ್‌ಗೆ ತೆರಳಿದ್ದ ಅವರು, ಬಳಿಕ ಹೆದ್ದಾರಿ ಬದಿಯಲ್ಲಿರುವ ಮಸೀದಿಗೆ ಹೋಗಲು ರಸ್ತೆ ದಾಟುತ್ತಿದ್ದರು. ಈ ವೇಳೆ ತಲಪಾಡಿಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಿಎಂಡಬ್ಲ್ಯು ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಹನೀಫ್ ಅವರಿಗೆ ಹಿಂದಿನಿಂದ ಬರುತ್ತಿದ್ದ ಮತ್ತೊಂದು ಕಾರು ಕೂಡ ಡಿಕ್ಕಿ ಹೊಡೆದಿದೆ.
ಅಪಘಾತದ ಬಳಿಕ ರಕ್ತದ ಮಡುವಿನಲ್ಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ಹನೀಫ್ ಅವರನ್ನು ಸ್ಥಳೀಯರು ಅಪಘಾತಕ್ಕೆ ಕಾರಣವಾದ ಕಾರಿನಲ್ಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ದಾರಿ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ. ಹನೀಫ್ ಅವರಿಗೆ ಡಿಕ್ಕಿ ಹೊಡೆದ ಎರಡೂ ಕಾರುಗಳ ಚಾಲಕರು ವೈದ್ಯರು ಎಂದು ತಿಳಿದುಬಂದಿದೆ. ಮೃತರು ಪತ್ನಿ, ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








