ಮಲ್ಪೆ : ಮಲ್ಪೆಯ ಬಾಬುತೋಟ ಧಕ್ಕೆಯ ಬಳಿ ಸೆಪ್ಟೆಂಬರ್ 28ರ ರಾತ್ರಿ ನಡೆದ ಆಂಧ್ರಪ್ರದೇಶ ಮೂಲದ ಪರಮೇಶಿ ಪರಮ್ ವೇಲಿ (55) ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಮಲ್ಪೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ಆರೋಗ್ಯದಾಸ್ ಕಾಮಿ (55) ಬಂಧಿತ ಆರೋಪಿ.
ಮಲ್ಪೆ ಬಂದರು ಪ್ರದೇಶದಲ್ಲಿ ಗುಜರಿ ಹೆಕ್ಕಿಕೊಂಡು ಜೀವನ ಸಾಗಿಸುತ್ತಿದ್ದ ಪರಮೇಶಿ ಅವರೊಂದಿಗೆ ಸೆಪ್ಟೆಂಬರ್ 28ರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ ಆರೋಪಿ ಆರೋಗ್ಯದಾಸ್, ಪರಮೇಶಿ ಮಲಗಿದ್ದ ಸ್ಥಳದಲ್ಲೇ ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದನು. ಸೆಪ್ಟೆಂಬರ್ 29ರ ಬೆಳಿಗ್ಗೆ ಸ್ಥಳೀಯರು ನೋಡಿದಾಗ ಪರಮೇಶಿ ಅವರು ಗೋಣಿ ಚೀಲದ ಮೇಲೆ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂದಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು, ಕಾರ್ಯಾಚರಣೆ ನಡೆಸಿ ಆರೋಪಿ ಆರೋಗ್ಯದಾಸ್ನನ್ನು ಹುಬ್ಬಳ್ಳಿಯ ಹೊಲವಲಯದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಹಾಗೂ ಮಲ್ಪೆ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನೀಲ್ ಕುಮಾರ ಡಿ., ಸಿಬ್ಬಂದಿಗಳಾದ ವಿಶ್ವನಾಥ, ಆದರ್ಶ ಹಾಗೂ ಕುಬೇರ ಅವರನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಚರಣೆ ನಡೆಸಿದೆ








